ಬುದ್ಧ,  ಬಸವಣ್ಣ ಅಂಬೇಡ್ಕರ್ ಜಯಂತಿ ಆಚರಣೆ


ಸಂಜೆವಾಣಿ ವಾರ್ತೆ
ರಾಷ್ಟ್ರೀಯ ಬಸವದಳ, ಮಾನವ ಬಂಧುತ್ವ ವೇದಿಕೆ ಮತ್ತು ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ  ಬಳ್ಳಾರಿಯ ಬಸವೇಶ್ವರ ನಗರದಲ್ಲಿರುವ ವಿಶ್ವಗುರು ಬಸವ ಮಂಟಪದಲ್ಲಿ ಭಗವಾನ್ ಬುದ್ಧ, ಜಗಜ್ಯೊತಿ ಬಸವಣ್ಣ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ರವರ ಜಯಂತಿಯನ್ನು ಹಮ್ಮಿಕೊಳ್ಳಲಾಗಿತ್ತು.
ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುಂಡ್ರಿಗಿ ನಾಗರಾಜ್ ಮಾತನಾಡಿ, ಭಗವಾನ್ ಬುದ್ಧನು ತಮ್ಮ ವಿಚಾರಧಾರೆಗಳಲ್ಲಿ ಸತ್ಯ, ಅಹಿಂಸೆ, ನ್ಯಾಯ, ಕರುಣೆಗಳ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಿದನು. ಸಾಮಾಜಿಕ ಶ್ರೇಣಿಗಳನ್ನು ಕಟುವಾಗಿ ಟೀಕಿಸಿ, ಮಾನವರೆಲ್ಲರು ಒಂದೆ ಎಂಬ ಸಂದೇಶವನ್ನು ಸಾರಿದನು. ಬಸವಣ್ಣರವರ ಅನುಭವ ಮಂಟಪ ಭಾರತದ ಮೊದಲ ಸಂಸತ್ ಆಗಿದ್ದು, ಅದರಲ್ಲಿ ಸರ್ವ ಜನಾಂಗದವರು ಭಾಗವಹಿಸುತ್ತಿದ್ದರು. ನಮ್ಮ ಕಾಂಗ್ರೆಸ್ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಹೆಸರಿಸಿ ಗೌರವಿಸಿದೆ. ಬಾಬಾಸಾಹೇಬರು ಕೇವಲ ದಲಿತರಿಗೆ ಮಾತ್ರ ಸೀಮಿತವಲ್ಲ. ದೇಶದಲ್ಲಿರುವ ಎಲ್ಲಾ ಜನರಿಗೆ ಅನುಕೂಲ ಆಗುವಂತೆ ಸಂವಿಧಾನ ರಚಿಸಿದ್ದಾರೆ. ಸರ್ವರಿಗೆ ಸಮಬಾಳು ಸರ್ವರಿಗೆ ಸಮಪಾಲು ಎಂಬುದು ಬಾಬಾಸಾಹೇಬರ ಆಶಯವಾಗಿತ್ತು. ಹಾಗಾಗಿ ಇಂದಿನ ಯುವಜನತೆ ಬುದ್ಧ, ಬಸವ, ಅಂಬೇಡ್ಕರರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಹಿರಿಯ ಮುಖಂಡರಾದ ಸಿರಿಗೇರಿ ಪನ್ನರಾಜ್, ಎ ಮಾನಯ್ಯ, ಹುಮಾಯೂನ್ ಖಾನ್, ಗಾದೆಪ್ಪ, ಶ್ರೀನಿವಾಸ ಮೂರ್ತಿ, ಎನ್.ಡಿ ವೆಂಕಮ್ಮ, ಕೆ ಎರ್ರಿಸ್ವಾಮಿ, ಸಂಗನಕಲ್ಲು ವಿಜಯ ಕುಮಾರ್ ಮುಂತಾದವರು ಉಪಸ್ಥಿತರಿದ್ದರು