ಬುದ್ಧ: ಜೀವನ ಕಾರುಣ್ಯ ನಿಧಿ

ಕಲಬುರಗಿ,ಆ.15-2500 ವರ್ಷದ ಹಿಂದಿಂನಿಂದಲೂ ಬಂದ ಅನೇಕ ಸಂಸ್ಕøತಿ ಗಳಿಗೆ ವಿಭಿನ್ನ ಆಯಾಮ ನೀಡಿದ ಮೊದಲಿಗ ತಥಾಗತ ಗೌತಮ ಬುದ್ಧ ಸ್ವಾತಂತ್ರ್ಯಪೂರ್ವ ಗೌತಮ ಬುದ್ಧನ ಜೀವನ ಚರಿತ್ರೆ ಕೃತಿಗಳ ಅನುಸಂಧಾನ ಮಾಡುತ್ತಾ, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಸಾಮಾಜಿಕ ವ್ಯವಸ್ಥೆ, ಬದುಕಿನಲ್ಲಿನ ಒತ್ತಡ ಸಂಕಟಗಳಲ್ಲಿ ತೊಳಲಾಡುವಂತ ಸಂದಿಗ್ಧ ಪರಿಸ್ಥಿತಿಯಿತ್ತು. ಆ ಕಾಲ ಘಟ್ಟದಲ್ಲಿ ಹಲವಾರು ಜನ ದಾರ್ಶನಿಕರಿದ್ದರು. ಗಾಂಧಿ, ಅಂಬೇಡ್ಕರ್ ವಿವೇಕಾನಂದ ಮುಂತಾದವರು ತಾತ್ವಿಕ ಚಿಂತನೆಗಳು ಪ್ರೇರಕ ಶಕ್ತಿಗಳಾಗಿದ್ದವು. ಆ ಕಾಲದ ಬುದ್ಧನ ಚರಿತ್ರೆಗಳು ವೈದಿಕರು ರಚಿಸಿರುವಂತದ್ದು ಕಾಣಬಹುದು. ಏಕೆಂದರೆ ಆ ಕಾಲಘಟ್ಟದಲ್ಲಿ ಅಕ್ಷರವಂತರಾದವರು ಬ್ರಾಹ್ಮಣರು. ಆದ್ದರಿಂದ ಬುದ್ಧನ ಜೀವನ ವೃತ್ತಾಂತವನ್ನು ಹೆಣೆದಿದ್ದು ಕಂಡುಬರುತ್ತವೆ. ಸ್ವಾತಂತ್ರ್ಯ ಪೂರ್ವದ ಸಾಂಸ್ಕøತಿಕ ನಾಯಕರಲ್ಲಿ ದಯೆ, ಸತ್ಯ, ಅಹಿಂಸೆ, ಮಾನವೀಯತೆ ಕರುಣೆ ಮುಂತಾದ ಮೌಲ್ಯಗಳನ್ನಿಟ್ಟುಕೊಂಡು ಬುದ್ಧನ ಜೀವನ ಚರಿತ್ರೆಗಳು ಹುಟ್ಟಿಕೊಂಡವು. ಆಗ ಬುದ್ಧನ ಬದುಕಿನ, ಸಮಾಜದ ಬೆಳಕಾಗಿ ಮೂಡಿಬಂದ. ದೀಪೋ ಭವಃ ನಿನ್ನ ನೀ ಬದಲಾವಣೆಗೊಳ್ಳು ನಿನ್ನಲ್ಲಿರು ಅತ್ತವ ಲೋಪ ದೋಷಗಳನ್ನು ತೊರೆದು, ಆದರ್ಶಪ್ರಾಯ, ತತ್ವಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕೆಂಬ ಆಶಯಗಳು ಹೊಂದಿದ್ದವು ಈ ಕಾರಣಕ್ಕಾಗಿ ಬುದ್ಧನನ್ನು ಭಿನ್ನ ನೆಲೆಯಲ್ಲಿ ರಚನೆಗೊಂಡಿವೆ. ಬುದ್ಧನ ಆದರ್ಶ ಚಿಂತನೆಗಳು ಜನಮಾನಸವನ್ನು ಸೂರೆಗೊಂಡವು. ಅವು ಸಾರ್ವಕಾಲಿಕ ಸತ್ಯ ಸಂಗತಿಗಳಾಗಿದ್ದವು ನೈತಿಕ ಮತ್ತು ವೈಚಾರಿಕ ನಿಲುವುಗಳಾಗಿದ್ದವು. ಜನಸಮುದಾಯಗಳ ನೋವು, ಸಂಕಟ, ಅನ್ಯಾಯಗಳಿಗೆ ಪರಿಹಾರೋಪಾಯಗಳನ್ನು ತೋರಿದ ಮಹಾದಾರ್ಶನಿಕ ಗೌತಮ ಬುದ್ಧ. ಈ ಕಾರಣಕ್ಕಾಗಿ ಸಮಾಜದಲ್ಲಿ ಅರಿವಿನ ಪ್ರಜ್ಞೆ, ವಿಸ್ತಾರಗೊಳ್ಳುತ್ತಾ ಬಂದಿತು ಎಂಬುದು ಗಮನಾರ್ಹ ಅಂಶ. ಹಲವಾರು ಭಾಷೆಗಳಲ್ಲಿ ಹಲವು ಆಯಾಮಗಳಲ್ಲಿ ಬುದ್ಧ ಚರಿತೆಗಳು ನಿರೂಪಣೆಗೊಂಡವು. ಇದು ಭಾರತೀಯ ಪರಂಪರೆಯೊಂದಿಗೆ ನಡೆಯುವ ಬುದ್ಧ ಚಿಂತನೆಗಳು ಸಂವಾದ, ಚರ್ಚೆ ಎಂದು ಹೇಳಬಹುದಾಗಿದೆ. ಬುದ್ಧ ಅಂದರೆ ಹಲವು ಸಾಧ್ಯತೆಗಳಿಗೆ ಮಾರ್ಗತೋರಿದಾತ ಸಕಲ ಜೀವರಾಶಿಗಳಲ್ಲಿ ಮೈತ್ರಿಭಾವ, ಕರುಣೆ, ಪ್ರಜ್ಞೆ ಮೂಲಕ ನೋಡಬೇಕೆಂಬ ಉದಾತ್ತವಾದ ಚಿಂತನೆ ಬಿತ್ತಿದ್ದಾತ. ಕ್ರಿ.ಶ.1888 ರಲ್ಲಿ ರಾವ್ ಬಹದ್ದೂರ ಶಾಮರಾಯರು ಬುದ್ಧನ ಜೀವನ ಚರಿತ್ರೆ ಬರೆದ ಕನ್ನಡದಲ್ಲಿ ರಚನೆಗೊಂಡ ಮೊದಲ ಕೃತಿಯಾಗಿದೆ. ಆಗ ಸಾಂಸ್ಕøತಿಕ ರಾಜಕಾರಣ ಮತ್ತು ಭಾಷಿಕ ರಾಜಕಾರಣಗಳು ಕಾರಣವಾಗಿರುವುದು ಕಾಣಬಹುದಾಗಿದೆ ಎಂದು ಡಾ.ಎಚ್.ಆಂಜಿನಪ್ಪ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಗೌತಮ ಬುದ್ದನ ಜೀವನ ಚರಿತ್ರೆ ಕೃತಿಗಳ ಅನುಸಂಧಾನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ನಂತರದ ಗೌತಮ ಬುದ್ಧನ ಜೀವನ ಚರಿತ್ರೆ ಕೃತಿಗಳ ಕುರಿತು ಡಾ. ಅರುಣ ಜೋಳದ ಕೂಡ್ಲಿಗಿಯವರು ಮಾತನಾಡುತ್ತಾ 75 ವರ್ಷಗಳ ಇತಿಹಾಸದಲ್ಲಿ ಹಲವಾರು ಬುದ್ಧನ ಜೀವನ ಕುರಿತಾದ ಚರಿತ್ರೆ ಕೃತಿಗಳು ಬಂದಿವೆ. ಸಾಹಿತ್ಯ ಪರಂಪರೆಯಲ್ಲಿ ಬೌದ್ಧ ಸಾಹಿತ್ಯ ಬೇರುಗಳು ಬೆಳೆದವು ಎಂಬುದು ಗಮನಾರ್ಹ. 1948ರಲ್ಲಿ ಜಿ.ಪಿ. ರಾಜಂ ಅವರ ‘ಸ್ವಾತಂತ್ರ್ಯ ಭಾರತದ ಅಶೋಕ ಚಕ್ರ ಧ್ವಜ’ ಎಂಬ ಕೃತಿ ಬದುಕು ಸಾಗಿಸಬೇಕಾದ ಪೂರ್ಣತೆ ರೀತಿಯನ್ನು ಸಾಂಕೇತಿಸುವ ನಿಟ್ಟಿನಲ್ಲಿ ಉಲ್ಲೇಖಗೊಂಡಿದೆ. ಈ ಕೃತಿಯಲ್ಲಿ ವೈದಿಕ ಪರಂಪರೆಗೆ ಜೋಡಿಸುವಂತ ಕೆಲಸ ನಡೆದದ್ದು ವಿಪರ್ಯಾಸ. ‘ವೈಶಾಖ ಶುಕ್ಲ ಪೂರ್ಣಿಮೆ’ ಅಥವಾ ಬುದ್ಧನಿಗೆ ಕನ್ನಡದ ಕಾಣಿಕೆ ಎಂಬ 103 ಪುಟದ ಕೃತಿ ರಚನೆಗೊಂಡಿದೆ. ಬುದ್ಧನ ಜನನ, ಜ್ಞಾನಾರ್ಜನೆ, ಪರಿನಿಬ್ಬಾಣ ಹೊಂದಿರುವದು ಪೂರ್ಣಿಯೆಂದು ಈ ಕಾರಣಕ್ಕಾಗಿ ಕೃತಿಗೆ ಶಿರ್ಷಿಕೆಯನಿಟ್ಟೆ ಎಂದು ಹೇಳಿದ್ದು ಕಾಣಬಹುದು. ಶಾಸನಗಳಲ್ಲಿ ಕೂಡ ಬುದ್ಧ ಚಿಂತನೆಗಳ ಉಲ್ಲೇಖಗೊಂಡಿರುವುದು ಕಾಣಬಹುದು. ಎಂ.ಎಂ. ಕಲಬುರಗಿಯವರು ‘ದಕ್ಷಿಣ ಭಾರತದ ಪರ್ಯಾಯ ಬುದ್ಧ’ ಬಸವಣ್ಣ ಎಂದದ್ದು ಗಮನಿಸಬಹುದು. ನಂತರ ಕರ್ನಾಟಕದಲ್ಲಿ ಬುದ್ಧ ಪ್ರಜ್ಞೆಯನ್ನು ವಿಸ್ತರಿಸಿವರಲ್ಲಿ ಬಿ.ಶ್ಯಾಮಸುಂದರ್ ಮತ್ತು ದೇವರಾಯ ಇಂಗಳೆ ಆದಿಯಾಗಿ ಕನ್ನಡದಲ್ಲಿ ಹೆಚ್ಚು ಬುದ್ಧನ ಕುರಿತಾದ ವಿಚಾರ, ಚಿಂತನೆ, ಬೋಧನೆಗಳ ಸಾಹಿತ್ಯ ಗ್ರಂಥಗಳು ರಚನೆಗೊಂಡವು. ಇತ್ತಿಚಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯಿಂದ ಹೊರಬಂದ ಆರು ಕನ್ನಡ ಬೌದ್ಧ ಸಂಪುಟಗಳು ಕಾವ್ಯ, ಕಥೆ, ಮಾನವಿಕ, ಸಂಶೋಧನೆ ಹಾಗೂ ನಾಟಕ ಸಂಪುಟಗಳು ರಚನೆಗೊಂಡಿರುವುದು ಮಹತ್ವದ್ದಾಗಿವೆ. ಸಿ.ಎಸ್. ರಾಜಶೇಖರ ಅವರು ಬೌದ್ಧ ಸಾಹಿತ್ಯಕ್ಕಾಗಿ ಶ್ರಮಿಸಿದಂತ ಹಿರಿಯ ವಿದ್ವಾಂಸರು. 250ಕ್ಕು ಹೆಚ್ಚು ಕೃತಿಗಳನ್ನು ಕನ್ನಡ ಬೌದ್ಧ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದು ಗಮನಾರ್ಹ. ಹೀಗೆ ಕನ್ನಡ ಸಾಹಿತ್ಯದಲ್ಲಿ ಸ್ವಾತಂತ್ರ್ಯ ನಂತರ ಬುದ್ಧನ ಕುರಿತಾದ ಜೀವನ ಚರಿತ್ರೆ, ವಿಚಾರ-ಚಿಂತನೆ, ನೈತಿಕತೆ, ಮೌಲಿಕತೆಗಳನ್ನು ಕಟ್ಟಿಕೊಡುವ ಕಾರ್ಯನಿರಂತರವಾಗಿ ನಡೆಯುತ್ತಿರುವುದು ಕಂಡುಬರುತ್ತದೆ ಎಂದರು.
ಕಾರ್ಯಗಾರದ ಸಮಾರೋಪದಲ್ಲಿ ಎಸ್.ಎಂ. ಜನವಾಡಕರ್ ಅವರು ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತರ ಕನ್ನಡ ಸಾಹಿತ್ಯದಲ್ಲಿ ರಚನೆಗೊಂಡವು. ಅವುಗಳ ಅವಲೋಕ ಅನುಸಂಧಾನಗೊಳಿಸುವುದು ಅವಶ್ಯಕ. ಬುದ್ಧನ ಕುರಿತಾದ ಜೀವನ ಚರಿತ್ರೆ ಕುರಿತು ಕಥೆ, ನಾಟಕ, ಕಾವ್ಯಗಳು, ರಚನೆಗೊಂಡಿವೆ. ಇವು ಕೃತಿಕಾರನ ಪರಿಸರ, ಸಮಕಾಲೀನ ಪ್ರಜ್ಞೆಗಳು ಸಮ್ಮಿಳತಗೊಂಡು ರಚನೆಗೊಂಡಿವೆ. ಚಿತ್ತ ಪ್ರಕಾರಗಳನ್ನು, ಹತ್ತು ಪಾರಮಿತಗಳನ್ನು ಹರಿಹಂತ, ಬುದ್ಧ, ಸಂಬುದ್ಧ ಎಂಬುದನ್ನು ಅರಿತುಕೊಂಡಾಗ ತಥಾಗತ ಗೌತಮ ಬುದ್ಧನ ಚಿಂತನೆಗಳ ಮೌಲಿಕತೆ ಮನದಟ್ಟಾಗುತ್ತವೆ. ಯಾವುದೇ ಚಿಂತನೆಗಳು ಬುದ್ಧ ಹೇಳಿದೆಲ್ಲ ಸತ್ಯವೆಂದು ಮೇಲ್ಮಾತಿಗೆ ನಂಬಬೇಡಿ, ಅದನ್ನು ಒರೆಗೆ ಹಚ್ಚಿ ಪರೀಕ್ಷಿಸಿ ಸತ್ಯ ಮತ್ತು ಉಪಯುಕ್ತವೆನಿಸಿದಾಗ ಒಪ್ಪಿ ಎಂದು ಹೇಳಿದ ಮಹಾದರ್ಶನಿಕ ತಥಾಗತ ಗೌತಮಬುದ್ಧ. ಕಲ್ಯಾಣ ಕರ್ನಾಟಕ ಪ್ರದೇಶ ಪ್ರಾಚೀನ ಕಾಲದಲ್ಲಿ ಬೌದ್ಧ ಧಮ್ಮ ಉಚ್ಚ್ರಾಯ ಸ್ಥಿತಿಯಲ್ಲಿತ್ತು ಎಂಬುದಕ್ಕೆ ಈ ಭಾಗದಲ್ಲಿನ ಲಿಖಿತ ಶಾಸನಗಳು ಸಾಕ್ಷಿಯೆನಿಸುತ್ತವೆ. ಈ ಪ್ರದೇಶದಲ್ಲಿ ಬೌದ್ಧ ಸಂಸ್ಕøತಿಗೆ ಸಂಬಂಧಿಸಿದ ಹಲವಾರು ಅಂಶಗಳು ದೊರೆಯುತ್ತವೆ. ಘಟಿಕಾಸ್ಥಾನಗಳು, ವಿಹಾರಗಳು, ಗ್ರಾಮಗಳ ಹೆಸರುಗಳಲ್ಲಿ ಬೌದ್ಧ ಧಮ್ಮದ ಹೆಸರುಗಳು ಮೂಡಿಬಂದಿವೆ ಎಂದರು. ಬೌದ್ಧ ಧಮ್ಮ ಚಿತ್ತ, ಮನಸ್ಸುಗಳ ನಿಯಂತ್ರಣಕ್ಕೆ ತರುವಂತದ್ದು, ಹೀಗಾಗಿ ಮಾನವೀಯತೆ ಗುಣಗಳು, ಪ್ರಜ್ಞೆ, ಶೀಲ, ಕರುಣೆ ತತ್ವಗಳು ಮಹತ್ವ ಪಡೆಯುತ್ತವೆ. ಈ ನಿಟ್ಟಿನಲ್ಲಿ ಈ ಎರಡು ದಿನಗಳಲ್ಲಿ ನಡೆದ ಚಿಂತನ ಮಂಥನಗಳನ್ನು ಯುವಪೀಳಿಗೆ ಅರಿತುಕೊಂಡರೆ ಪ್ರಬುದ್ಧರಾಗಬಹುದು ಎಂದರು.
ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಸಿದ್ದಾರ್ಥ, ಬುದ್ಧ, ಸಂಬುದ್ಧನನ್ನು ತಿಳಿದುಕೊಳ್ಳಬೇಕಾಗಿದೆ. ನಾವು ಕೇವಲ ಸಿದ್ಧಾರ್ಥ, ಬುದ್ಧನನ್ನು ಅಲ್ಪಸ್ವಲ್ಪ ಅರಿತುಕೊಂಡಿದ್ದು ದುರಂತ. ಯುವಪೀಳಿಗೆ ಸಿದ್ಧಾರ್ಥ, ಬುದ್ಧ, ಸಂಬುದ್ದನನ್ನು ಅರ್ಥೈಸಿಕೊಳ್ಳಬೇಕಾಗಿದೆ. ಅಂದಾಗ ಮಾತ್ರ ಬುದ್ಧನ ಚಿಂತನೆ, ಬೋಧನೆ ಆಶಯಗಳು ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಬುದ್ಧ ಪ್ರಜ್ಞೆ ಬೆಳೆಸಿಕೊಳ್ಳಲು, ವಿಸ್ತರಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು. ಈ ಎರಡು ದಿನದ ಕಾರ್ಯಗಾರದಲ್ಲಿ ಮಂಡನೆಗೊಂಡ ವಿಚಾರ, ಚಿಂತನೆಗಳು ಮೌಲಿಕವಾಗಿದ್ದವು ಇವು ಬೌದ್ಧ ಧಮ್ಮದೆಡೆಗೆ ಕರೆದೊಯ್ಯುತ್ತವೆ ಎಂದರು ಪ್ರೊ. ಎಚ್.ಟಿ. ಪೋತೆ, ಡಾ. ಶ್ರೀಶೈಲ ನಾಗರಾಳ ಉಪಸ್ಥಿತರಿದ್ದರು. ಡಾ. ಹಣಮಂತ ಮೇಲಕೇರಿ ವಂದಿಸಿದರು. ಡಾ. ಪ್ರಕಾಶ ಸಂಗಮ ನಿರೂಪಿಸಿದರು.