ಬುದ್ಧ, ಅಂಬೇಡ್ಕರ್‍ರಿಂದ ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನತೆ

ಕಲಬುರಗಿ,ಆ.28-ಬೌದ್ಧ ಧರ್ಮದಲ್ಲಿ ಮಹಿಳೆಗೆ ಉನ್ನತ ಸ್ಥಾನ ನೀಡಿದ ಬುದ್ಧ, 500 ಮಹಿಳೆಯರು ಉನ್ನತ ಸ್ಥಾನ ಹೊಂದಿದರು, ಇಂದಿನ ಮಹಿಳೆಯರು ವ್ಯವಸ್ಥೆಯನ್ನು ಹೊಂದಿಕೊಂಡು ಬದುಕುತ್ತಿದ್ದಾರೆ, ವಿರೋಧಿಸಿ ನಡೆಯುತ್ತಿಲ್ಲ, ಬುದ್ದ ಮಹಿಳೆಯರಿಗೆ ಗೌರವದಿಂದ ಕಾಣುತ್ತಾನೆ. ಮಕ್ಕಳಿಗೆ ತಾಯಿಯ ಹೆಸರಿನಿಂದ ಗುರುತಿಸಲಾಗುತ್ತದೆ. ಮಾತೃ ಪ್ರಧಾನ ಕುಟುಂಬ ಬುದ್ಧನಲಿ ಕಾಣುತ್ತೇವೆ. ಹೆಣ್ಣು ಮೋಕ್ಷವನ್ನು ಪಡೆಯಬಹುದು. ಚಿತ್ತವು ಸಮಾಧಾನ ತಂದಿರುವಾಗ ಸಮೈಕ್ ಜ್ಞಾನ ಇದ್ದಾಗ ಹೆಣ್ಣಾದರೇನು ಗಂಡಾದರೇನು ಮೋಕ್ಷ ಪಡೆಯಬಹುದು. ನಾನು ಎಂಬ ಅಹಂಕಾರ ಹೋಗಬೇಕು ಆಗ ಸ್ವರ್ಗಕ್ಕೆ ಹೋಗಬಹುದು ಎಂದು ಕನಕದಾಸರು ಹೇಳಿದರು. ವರ್ಣಾಶ್ರಮ ಪದ್ದತಿ ಇಲ್ಲ , ತಾರತಮ್ಯ ಇಲ್ಲ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳುತ್ತಾರೆ. ಸಕಲ ಜೀವಿಗಳ ಸ್ವಾತಂತ್ರ್ಯ ನಿಡಿದ್ದು ಬೌದ್ಧ ಧರ್ಮ. ಅಂಬೇಡ್ಕರ್ ಅವರು ಮಹಿಳೆಯರಿಗೆ ಸಂವಿಧಾನದ ಮೂಲಕ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಿದ್ದಾರೆ. ರಾಷ್ಟ್ರಪತಿ, ಪ್ರಧಾನಿ, ಚಂದ್ರಲೋಕ ಪ್ರವೇಶ, ಎಲ್ಲಾ ರಂಗದಲ್ಲಿ ಮಹಿಳೆಯರು ಭಾಗವಹಿಸಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ನೆರವಿನಿಂದ ಸಾಧ್ಯವಾಗಿದೆ. ಹೀಗಾಗಿ ಬುದ್ಧ ಮತ್ತು ಅಂಬೇಡ್ಕರರು ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನತೆ ನೀಡಿದವರು ಎಂದು ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ನುಡಿದರು.
ಕನ್ನಡ ಭವನದ ಸುವರ್ಣ ಸಭಾಂಗಣದಲ್ಲಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಮತ್ತು ಕಾನೇಕರ್ ಅಭಿಮಾನಿ ಬಳಗದ ಆಶ್ರಯದಲ್ಲಿ ಕಾನೇಕರ್ ಅವರ 49ನೇ ಸಂಭ್ರಮದ ನಿಮಿತ್ಯ ಏರ್ಪಡಿಸಿದ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.
ಮಹಿಳೆಯರ ಮೇಲೆ ಯಾಕೆ ದೌರ್ಜನ್ಯ ಅತ್ಯಾಚಾರಗಳು ನಿಂತಿಲ್ಲ ಎನ್ನುವದನ್ನು ಹೋರಾಟಗಾರರು ಆಲೋಚನೆ ಮಾಡಬೇಕಾಗಿದೆ. ಮಹಿಳೆಯರನ್ನು ಒಗ್ಗೂಡಿಸಿ ಹೋರಾಟ ಮಾಡಬೇಕು. ಅನೇಕ ಮಹಿಳಾ ಸಂಘಟನೆಗಳು ಇದ್ದರು ಅತ್ಯಾಚಾರಗಳು ನಿಂತಿಲ್ಲ. ಮಣಿಪಾಲ ಅತ್ಯಾಚಾರ ನಮ್ಮ ಕಣ್ಣ ಮುಂದೆ ಇದೆ. ಚಿಂತನೆ ನಡೆಯಬೇಕಾದ ಸಮಯ ಇದಾಗಿದೆ ಎಂದರು.
ಜಾತಿರಹಿತ ಭಾರತವನ್ನು ನಿರ್ಮಾಣ ಮಾಡುವುದೇ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸಾಗಿತ್ತು. ತನ್ನ ಐದು ಜನ ಮಕ್ಕಳು ನಿಧನರಾದರೂ ಸಮುದಾಯಕ್ಕಾಗಿ ಜೀವನವನ್ನು ಸಮರ್ಪಿಸಿಕೊಂಡರು. ತಳ ಸಮುದಾಯದ ಜನರು ಅರ್ಜಿಕೊಡುವ ಜಾಗದಲ್ಲಿ ನಿಲ್ಲದೇ ತಗೆದುಕೊಳ್ಳುವ ಜಾಗದಲ್ಲಿ ಕೂಡಬೇಕು. ದಲಿತರು ತಮ್ಮ ಮಕ್ಕಳನ್ನು ಉನ್ನತ ಸ್ಥಾನಕ್ಕೆ ತಲುಪುವ ಕನಸು ಮತ್ತು ಅವರಿಗೆ ಸಂಸ್ಕಾರವನ್ನು ನೀಡಬೇಕು. ಬುದ್ಧ, ಬಾಬಾಸಾಹೇಬ್‍ರ ತತ್ವಗಳನ್ನು ಪಾಲಿಸಲು ಮೈಸೂರಿನ ಜ್ಞಾನ ಪ್ರಕಾಶ ಸ್ವಾಮೀಜಿ ಕರೆ ನೀಡಿದರು.
ಶ್ರಮಿಕ ಜೀವಿಗಳಾದ ಆರೋಗ್ಯ ಇಲಾಖೆಯ ವೇರಿಲಿಲ್ಲಾ ಶ್ರೊ, ಅವನ್ನಿಷಾ, ಪೌರ ಕಾರ್ಮಿಕರಾದ ತಿಮ್ಮಣ್ಣ ಚಂದ್ರಶಾ, ಸುಭಾಷ್, ರೈತರಾದ ಶಿವಶಂಕರ ಸಾಂತಪ್ಪ, ಶರಣಬಸಪ್ಪ, ಕಾರ್ಮಿಕರಾದ ಷಣ್ಮುಖ ಮಾ ಣಿಕ, ಮಡಿವಾಳರಾದ ಶಿವಪುತ್ರ ಮಲ್ಲಾಬಾದಕರ್, ರವೀಂದ್ರ ಅಗಸರ ಇವರು ಕಾರ್ಯಕ್ರಮವನ್ನು ಬುದ್ಧ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡಿ ಜ್ಯೋತಿಯ ಮೂಲಕ ಉದ್ಘಾ ಟಿಸಿದರು.
ಅಣದೂರ ಬೌದ್ಧ ವಿಹಾರದ ಭಂತೆ ವರಜ್ಯೋತಿ ಆಶೀರ್ವಚನ ನೀಡಿದರು. ಬೇಲೂರು ಉರಿಲಿಂಗಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ ನೇತೃತ್ವ, ಭಾರತೀಯ ಬೌದ್ಧ ಮಹಾಸಭಾ ರಾಜ್ಯಾಧ್ಯಕ್ಷ ಸೂರ್ಯಕಾಂತ ನಿಂಬಾಳಕರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸುರೇಶ್ ಕಾನೇಕರ, ಡಾ.ಸಂಧ್ಯಾ ಕಾನೇಕರ್, ಲಕ್ಷ್ಮೀಬಾಯಿ ಶಿವಶಂಕರ್ ಕಾನೇಕರ್ ಉಪಸ್ಥಿತರಿದ್ದರು.
ಕೀರ್ತಿರತನ್ ಸೋನಾಲೆ, ಕಾಳಿದಾಸ ಸೂರ್ಯವಂಶಿ, ರಾಜಕುಮಾರ ಉಜ್ಜ್ವಲೆ ಅತಿಥಿಗಳಾಗಿದ್ದರು.
ಧಮ್ಮಗೀತೆಗಳನ್ನು ಸಿದ್ಧಾರ್ಥ ಚಿಮ್ಮಾಇದ್ಲಾಯಿ ತಂಡದವರು ಹಾಡಿದರು. ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಸುನೀಲ ಜಾಬಾದಿ ಸ್ವಾಗತಿಸಿದರು. ಸಂಚಾಲಕ ಡಾ.ಗವಿಸಿದ್ಧಪ್ಪ ಪಾಟೀಲ ಪ್ರಾಸ್ತಾವಿಕ ನುಡಿ ಆಡಿದರು ದಸಾಪ ಕಾರ್ಯದರ್ಶಿ ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು ಮಲ್ಲಿನಾಥ ನಿಂಬರ್ಗಾ ವಂದಿಸಿದರು.