ಬುದ್ಧಿ ಹೇಳಿದ ಯುವತಿ ತಂದೆ ಕೊಲೆ

ಬೆಂಗಳೂರು, ಸೆ. ೩- ನನ್ನ ಮಗಳ ವಿಚಾರಕ್ಕೆ ಬರಬೇಡ ಎಂದು ಬುದ್ದಿ ಹೇಳಲು ಹೋಗಿದ್ದ ತಂದೆಯನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಅಶೋಕ್ ನಗರದ ನಂಜಪ್ಪ ಸರ್ಕಲ್ ಬಳಿ ನಡೆದಿದೆ.
ಅನ್ವರ್ ಹುಸೇನ್ ಕೊಲೆಯಾದವರು,
ಕೃತ್ಯ ನಡೆಸಿ ಪರಾರಿಯಾಗಿರುವ ಆರೋಪಿ ಝಹೀದ್ ಬಂಧನಕ್ಕೆ ಅಶೋಕನಗರ ಪೊಲೀಸರು ತೀವ್ರ ಶೋಧ ಕೈಗೊಂಡಿದ್ದಾರೆ. ಹಲವು ದಿನಗಳಿಂದ ಆರೋಪಿ ಝಹೀದ್ ಪ್ರೀತಿಸುವಂತೆ ೧೫ ವರ್ಷದ ಅಪ್ರಾಪ್ತ ಬಾಲಕಿಯ ಬೆನ್ನು ಬಿದ್ದಿದ್ದು,ಈ ವಿಚಾರವನ್ನು ಅಪ್ರಾಪ್ತ ಬಾಲಕಿ ತಂದೆ ಅನ್ವರ್ ಹುಸೇನ್ ಬಳಿ ಹೇಳಿಕೊಂಡಿದ್ದಳು. ಹೀಗಾಗಿ ಅನ್ವರ್ ಹುಸೇನ್ ಮೂರು ತಿಂಗಳ ಹಿಂದೆಯೇ ಆರೋಪಿ ಝಹೀದ್‌ಗೆ ಬುದ್ದಿ ಹೇಳಿದ್ದರು. ಆದರೂ ಮಾತು ಕೇಳದ ಝಹೀದ್ ಪ್ರೀತಿಸುವಂತೆ ಮತ್ತೆ ದುಂಬಾಲು ಬಿದ್ದಿದ್ದನು.
ಈ ವಿಚಾರವನ್ನು ಝಹೀದ್ ಅಣ್ಣ ಬಿಲಾಲ್ ಹಾಗೂ ಕುಟುಂಬಸ್ಥರಿಗೆ ತಿಳಿಸಲೆಂದು ನಿನ್ನೆ ರಾತ್ರಿ ಅನ್ವರ್ ಹುಸೇನ್ ಆರೋಪಿಯ ಮನೆ ಬಳಿ ಹೋಗಿದ್ದಾರೆ. ಕುಟಂಬಸ್ಥರೊಂದಿಗೆ ಅನ್ವರ್ ಹುಸೇನ್ ಮಾತನಾಡುತ್ತಿರುವಾಗಲೇ, ಝಹೀದ್ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಬಂದು ಏಕಾಏಕಿ ಅನ್ವರ್ ಹುಸೇನ್ ಕುತ್ತಿಗೆಗೆ ಇರಿದಿದ್ದಾನೆ.
ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅನ್ವರ್ ಹುಸೇನ್‌ರನ್ನು ವೈದೇಹಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ. ಚಿಕಿತ್ಸೆ ಫಲಕಾರಿಯಾಗದೆ ಅನ್ವರ್ ಹುಸೇನ್ ಮೃತಪಟ್ಟಿದ್ದಾರೆ. ಇನ್ನು ಪ್ರಕರಣ ಸಂಬಂಧ ಝಹೀದ್ ಅಣ್ಣ ಬಿಲಾಲ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತಲೆಮರಿಸಿಕೊಂಡಿರುವ ಅರೋಪಿ ಝಹೀದ್‌ಗಾಗಿ ಹುಡಕಾಟ ನಡೆಸಿದ್ದಾರೆ.