ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಬಸವ ಪಂಚಮಿ ಆಚರಣೆ

ಬೀದರ:ಆ.3:ನವಜೀವನ ಬುದ್ಧಿಮಾಂದ್ಯ ವಿಶೇಷ ವಿಕಲಚೇತನ ಮಕ್ಕಳ ಮಕ್ಕಳ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಬೀದರ್ ನಲ್ಲಿ ಬಸವ ಪಂಚಮಿಯನ್ನು ಆಚರಿಸಲಾಯಿತು, ಅಖಿಲ ಭಾರತ ವಿಶ್ವವಿದ್ಯಾಲಯ ನೌಕರರ ಒಕ್ಕೂಟ, ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ, ನ್ಯೂ ಮದರ್ ತೆರೇಸಾ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಡಾಕ್ಟರ್ ಕೇರ್ ಚಾರಿಟೇಬಲ್ ಟ್ರಸ್ಟ್ ಇವುಗಳ ಸಂಯುಕ್ತಾಶ್ರಯದಲ್ಲಿ ನಾಗರ ಪಂಚಮಿಯ ಮೌಢ್ಯತೆಯ ಅರಿವು ಮೂಡಿಸಲು ಮತ್ತು ವೈಜ್ಞಾನಿಕವಾಗಿ ಆಚರಣೆ ಮಾಡ ತಕ್ಕಂತಹ ಬಸವ ಪಂಚಮಿಯನ್ನು ಆಚರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ತಿಳಿಸಲಾಯಿತು. ಹಾವಿಗೆ ಹಾಲೆರೆದು ಹಾಲನ್ನು ಪೆÇೀಲು ಮಾಡದೆ, ಅವಶ್ಯಕತೆ ಇರುವ ಮಕ್ಕಳಿಗೆ/ವ್ಯಕ್ತಿಗಳಿಗೆ ಹಾಲನ್ನು ಕುಡಿಸಿದರೆ ಅದು ಸಾರ್ಥಕವಾಗುತ್ತದೆ ಹಾಗೂ ಪರಂಪರಾನುಗತ ನಡೆದುಕೊಂಡು ಬಂದಿರುವ ಮೌಡ್ಯತೆಯನ್ನು ಕೂಡ ತೊಲಗಿಸಲು ಸಹಾಯಕವಾಗುತ್ತದೆ. ಜನರಲ್ಲಿರುವ ಅಂಧಶ್ರದ್ಧೆ ಹಾಗೂ ಅವ್ಯಾಹತವಾಗಿ ನಡೆದುಕೊಂಡು ಬಂದ ಕಂದಾಚಾರವನ್ನು ಹೋಗಲಾಡಿಸುವ ಸಲುವಾಗಿ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸಿ ಅನಾಥ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ಹಣ್ಣು ಹಂಪಲನ್ನು ವಿತರಿಸುವ ಮೂಲಕ ಜನತೆಗೆ ವೈಜ್ಞಾನಿಕ ಸಂದೇಶ ನೀಡಲು ಪ್ರಯತ್ನಿಸಲಾಗುವುದು ಎಂದು, ಪಶು ವಿಶ್ವವಿದ್ಯಾಲಯದ ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ ರವರು ಬಸವ ಪಂಚಮಿಯ ಮಹತ್ವವನ್ನು ವಿವರಿಸಿದರು.
ನ್ಯೂ ಮದರ್ ತೆರೇಸಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂಜು ಕುಮಾರ್ ಸ್ವಾಮಿ ಅವರು ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ನಾವುಗಳು ವೈಜ್ಞಾನಿಕ ಅಂಶಗಳ ಬಗ್ಗೆ ಹೆಚ್ಚು ಗಮನ ಕೊಡುವುದು ಅವಶ್ಯಕವಾಗಿದೆ ಹಾಗೂ ವೈಜ್ಞಾನಿಕ ಅರಿವು ಮೂಡಿಸುವ ಕಾರ್ಯಕ್ರಮಗಳು ಅಲ್ಲಲ್ಲಿ ಮಾಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಪ್ರಗತಿ ಶಿಕ್ಷಣ ಸಂಸ್ಥೆ ಯ ಅಧ್ಯಕ್ಷರಾದ ಅರವಿಂದ್ ಕುಲಕರ್ಣಿ ಅವರು ಮಾತನಾಡಿ, ಭಾರತ ದೇಶದಲ್ಲಿ ಅದೆಷ್ಟೋ ಮಕ್ಕಳು ಮಹಿಳೆಯರು ಗ್ರಾಮೀಣ ಭಾಗದ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಪೌಷ್ಟಿಕವಾದ ಆಹಾರದಲ್ಲಿ ಒಂದಾದ ಹಾಲು ಹಣ್ಣು ತರಕಾರಿ ಇವುಗಳು ಬಡ ಜನರಿಗೆ ಮತ್ತು ಅಪೌಷ್ಟಿಕ ಮಕ್ಕಳಿಗೆ ನೀಡುವುದರೊಂದಿಗೆ ನಾಗರ ಪಂಚಮಿ ಜೊತೆಯಲ್ಲಿ ಪೌಷ್ಟಿಕ ಆಹಾರದ ಜಾಗೃತಿ ಕಾರ್ಯಕ್ರಮವನ್ನು ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಪ್ರಶಂಶಿಸಿದರು. ಮಾಧ್ಯಮಿಕ ಶಾಲೆಗಳ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಶಾಂತಕುಮಾರ್ ಬಿರಾದರ್ ಅವರು ಮಾತನಾಡಿ, ಇಂದಿನ ಕಾರ್ಯಕ್ರಮವನ್ನು ವಿಶೇಷ ವಿಕಲಚೇತನ ಮಕ್ಕಳ ವಸತಿ ಶಾಲೆಯಲ್ಲಿ ಆಚರಣೆ ಮಾಡುವ ಮೂಲಕ, ಬಸವ ಪಂಚಮಿಯನ್ನು ಈ ಜಂಟಿ ಸಂಸ್ಥೆಗಳ ವತಿಯಿಂದ ಆಚರಣೆ ಮಾಡಿರುವುದು ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟರು. ನವಜೀವನ್ ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಮಕ್ಕಳಿಗೆ ಹಣ್ಣು ಹಂಪಲು ನೀಡಲಾಯಿತು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಮಾರುತಿ, ನಾಗನಾಥ್, ನರಸಿಂಹ ನೂರಜಹಾನ್, , ಮಕ್ಕಳುಗಳಾದ ಸಾಮುವೆಲ್, ಮಾಧವ, ಸಾಯಿ, ಅಭಿಲಾಷ್, ಮೊಹಮ್ಮದ್, ರವಿ ಮುಂತಾದವರು ಉಪಸ್ಥಿತರಿದ್ದರು.