ಬುಡಾ ಅಧ್ಯಕ್ಷರಾಗಿ 10 ತಿಂಗಳಲ್ಲಿ 30 ಕೋಟಿ ಆದಾಯ ಸಂಗ್ರಹ:ದಮ್ಮೂರು ಶೇಖರ್

ಬಳ್ಳಾರಿ, ಏ.04: ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಕಳೆದ 10 ತಿಂಗಳಲ್ಲಿ ಬಿಡಿ ನಿವೇಶನಗಳ ಮಾರಾಟ, ಖಾಸಗಿ ವಿನ್ಯಾಸಗಳಿಗೆ ಅನುಮೋದನೆ, ಸಿ.ಎ.ಸೈಟ್ ಗಳ ಮಂಜೂರಿನಿಂದ 30 ಕೋಟಿ ರೂ ಆದಾಯ ಪಡೆಯಲಾಗಿದೆ ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬುಡಾ ಅಸ್ತಿತ್ವಕ್ಕೆ 1988ರಲ್ಲಿ ಬಂದಿದ್ದು ಈ ವರೆಗಿನ ಅಧ್ಯಕ್ಷರಾರು ಇಷ್ಟೊಂದು ಮೊತ್ತದ ಆದಾಯ ಬುಡಾಗೆ ಕಡಿಮೆ ಅವಧಿಯಲ್ಲಿ ತಂದಿರಲಿಲ್ಲ ಎಂದರು.
ಮಹಾ ಯೋಜನೆ 2021ಕ್ಕೆ ಮುಕ್ತಾಯವಾಗಿದ್ದು ಹೊಸ ಯೋಜನೆಯಲ್ಲಿ ಬಳ್ಳಾರಿ ತಾಲೂಕಿನ ಇನ್ನು 12 ಹಳ್ಳಿಗಳನ್ನು ಸೇರಿಸಲಿದೆಂದು ಅವರು ನಗರದ 7 ಕಡೆ ಬಸ್ ಸೆಲ್ಟರ್ ಗಳನ್ನು ನಿರ್ಮಿಸಿದೆ. ಒಟ್ಟಾರೆ 32 ಕಡೆ ಇಂತಹ ಬಸ್ ಸೆಲ್ಟರ್ ಖಾಸಗಿ ಕಂಪನಿಗಳ ಸಿ.ಎನ್.ಆರ್ ಫಂಡ್ ನಿಂದ ನಿರ್ಮಿಸಲಿದೆ.
ನಗರದ ಜೋಳದರಾಶಿ ರಂಗಮಂದಿರದಲ್ಲಿ ದೊಡ್ಡನಗೌಡರ, ಮುನಿಸಿಪಲ್ ಮೈದಾನದಲ್ಲಿ ಬಹದ್ದೂರು ಶೇಷಗಿರಿರಾವ್, ಕನ್ನಡ ಭವನದಲ್ಲಿ ಫೈಲ್ವಾನ್ ರಂಜಾನ್ ಸಾಬ್, ಉದ್ಯಾನವನದಲ್ಲಿ ಹರಗಿನಡೋಣಿ ಸಣ್ಣ ಬಸನಗೌಡ, ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಸಾವಿತ್ರಿ ಬಾಯಿಪುಲೆ, ವಿವೇಕಾನಂದ ಪುತ್ಥಳಿಗಳನ್ನು ಪ್ರತಿಷ್ಠಾಪಿಸಲಿದೆ.
ಐತಿಹಾಸಿಕ ಬಳ್ಳಾರಿ ಬೆಟ್ಟಕ್ಕೆ ಕೋಬಿಲ್ ಕಾರ್ (ರೋಪಿವೇ)- ಸಂಗನಕಲ್ಲು ಬೆಟ್ಟದ, ಮಿಂಚೇರಿ ಬೆಟ್ಟದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿದೆ. ನಗರದ 21 ಪಾರ್ಕ್ ಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಕೆ ಮತ್ತು ಅವುಗಳಿಗೆ ಮಹನೀಯರ ಹೆಸರಿಡಲು ನಗರ ಪಾಲಿಕೆಗೆ ಶಿಫಾರಸ್ಸು ಮಾಡಿದೆ. ಬುಡಾ ಆವರಣದಲ್ಲಿನ ಇಂದಿರಾ ಕ್ಯಾಂಟೀನ್ ಸ್ಥಳಾಂತರ ಮಾಡಿ ಅಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಿದೆಂದರು.
ನಗರದಲ್ಲಿ ಜನರಿಗೆ ಕಡಿಮೆ ಧರದಲ್ಲಿ ನಿವೇಶನಗಳು ಲಭ್ಯವಾಗುವಂತೆ ಮಾಡಲು ಬಿ.ಗೋನಾಳು ಬೈಪಾಸ್ ರಸ್ತೆ ಬಳಿ 102 ಎಕರೆ ಪ್ರದೇಶದಲ್ಲಿ ಲೇಔಟ್ ಅಭಿವೃದ್ಧಿ ಪಡಿಸುತ್ತಿದೆ. ಸದ್ಯದಲ್ಲೇ ನಿವೇಶನಗಳ ರಚನೆಗೆ ಟೆಂಡರ್ ಕರೆಯಲಿದೆಂದರು.
ಟಿ.ಬಿ.ಸ್ಯಾನಿಟೋರಿಯಂನಿಂದ ಹೊಸಪೇಟೆ ರಸ್ತೆಯವರೆಗೆ ರಸ್ತೆ ಅಭಿವೃದ್ಧಿ, ರಾಜ್ ಕುಮಾರ್ ಉದ್ಯಾನವನ್ನು 4 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ, ಡಿ.ಎಂ.ಎಫ್ ಅನುದಾನದಲ್ಲಿ 4.58 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೈಗೊಂಡಿದೆ. ನಗರದ ಮೋತಿ ಟಾಕೀಸ್ ಬಳಿಯ ರೈಲ್ವೇ ಬ್ರಿಡ್ಜ್ ಅಗಲೀಕರಣ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಇದಕ್ಕೆಲ್ಲಾ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ನಗರ ಶಾಸಕ ಜಿ.ಸೋಮಶೇಖರರೆಡ್ಡಿ, ಸಂಘದ ದೇವೇಂದ್ರಪ್ಪ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಹಕಾರವೇ ಕಾರಣ ಎಂದರು.