ಬುಡಾದ 47 ನಿವೇಶನ ಹಂಚಿಕೆಗೆ ಹೈಕೋರ್ಟ್ ತಡೆ

ಬೀದರ್:ಮಾ.19: ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ 47 ನಿವೇಶನಗಳ ಹರಾಜು ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ತಿಳಿಸಿದರು.

ಬುಡಾ ಅಧ್ಯಕ್ಷ ಹಾಗೂ ಆಯುಕ್ತ ಸೇರಿಕೊಂಡು ಕಡಿಮೆ ಬೆಲೆಯಲ್ಲಿ ನಿವೇಶನಗಳ ಮಾರಾಟ ಮಾಡಿ ಸರ್ಕಾರಕ್ಕೆ ಹಾನಿ ಉಂಟು ಮಾಡುತ್ತಿರುವ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ದೂರು ಸಲ್ಲಿಸಲಾಗುವುದು ಎಂದು ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ನಗರದಲ್ಲಿನ 47 ನಿವೇಶನಗಳನ್ನು ಹಂಚಿಕೆ ಮಾಡಲು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಕಡಿಮೆ ಪ್ರಸರಣ ಸಂಖ್ಯೆ ಇರುವ ಪತ್ರಿಕೆಗಳಲ್ಲಿ ಮಾರ್ಚ್ 1ರಂದು ಜಾಹೀರಾತು ಪ್ರಕಟಿಸಿತ್ತು. ಮಾರ್ಚ್ 4ರಂದು ಇನ್ನೊಂದು ತಿದ್ದುಪಡಿ ಟೆಂಡರ್ ಪ್ರಕಟಿಸಿತ್ತು. ಅರ್ಜಿ ಸಲ್ಲಿಸಲು ಮಾರ್ಚ್ 28 ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ, ಟೆಂಡರ್ ಅಧಿಸೂಚನೆ ಪ್ರಕಟಗೊಂಡ ಮರು ದಿನವೇ ದಿನಾಂಕವನ್ನು ಮಾರ್ಚ್ 20ಕ್ಕೆ ನಿಗದಿಪಡಿಸಲಾಗಿತ್ತು ಎಂದು ತಿಳಿಸಿದರು.

ಬುಡಾದ ನಿರ್ಧಾರದಿಂದಾಗಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ತೊಂದರೆಯಾಗಿತ್ತು. ಹೀಗಾಗಿ ಬುಡಾ ಅಧ್ಯಕ್ಷ ಹಾಗೂ ಆಯುಕ್ತರ ವಿರುದ್ಧ ಕಲಬುರಗಿ ಹೈಕೋರ್ಟ್‍ನಲ್ಲಿ ಪ್ರಕರಣ ದಾಖಲಿಸಬೇಕಾಯಿತು. ದಾಖಲೆಗಳನ್ನು ಪರಿಶೀಲಿಸಿದ ಹೈಕೋರ್ಟ್ ನಿವೇಶನ ಹಂಚಿಕೆಗೆ ತಡೆಯಾಜ್ಞೆ ನೀಡಿದೆ. ಹತ್ತು ದಿನಗಳಲ್ಲಿ ಉತ್ತರಿಸುವಂತೆ ಬುಡಾ ಅಧ್ಯಕ್ಷ ಹಾಗೂ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದೆ ಎಂದು ಹೇಳಿದರು.

ಕಡಿಮೆ ಹಣದಲ್ಲಿ ಪ್ರಭಾವಿ ರಾಜಕಾರಣಿಗಳ ಪತ್ನಿಯರು ಹಾಗೂ ಮನೆಗೆಲಸದವರ ಹೆಸರಿನಲ್ಲಿ ನಿವೇಶನ ಮಾರಾಟ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬುಡಾದ ನಿವೇಶನಗಳನ್ನು ಕೇವಲ ? 4 ಲಕ್ಷದಿಂದ ? 5 ಲಕ್ಷಗೆ ಮಾರಾಟ ಮಾಡಿ ಸರ್ಕಾರದ ಬೊಕ್ಕಸಕ್ಕೆ ಹಾನಿ ಉಂಟು ಮಾಡಲಾಗುತ್ತಿತ್ತು. ಅಲ್ಲದೇ ಖರೀದಿದಾರರಿಂದ ಹೆಚ್ಚುವರಿ ಹಣ ಪಡೆದುಕೊಳ್ಳಲು ಹುನ್ನಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ವಿವರಿಸಿದರು.

ವಾರ್ತಾ ಇಲಾಖೆಯ ಮೂಲಕವೇ ಜಾಹೀರಾತು ಕೊಟ್ಟು ವ್ಯವಸ್ಥಿತವಾಗಿ ಗೋಲ್‍ಮಾಲ್ ಮಾಡಲಾಗಿದೆ. ಒಂದು ರಾಜ್ಯ ಮಟ್ಟದ ಪತ್ರಿಕೆ ಹಾಗೂ ಎರಡು ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ಕೊಡಬೇಕಿತ್ತು. ಉದ್ದೇಶ ಪೂರ್ವಕವಾಗಿಯೇ ಕಡಿಮೆ ಪ್ರಸರಣ ಇರುವ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಲಾಗಿದೆ. ಇದಕ್ಕೆ ಬುಡಾ ಅಧ್ಯಕ್ಷರೇ ಕಾರಣ ಎಂದು ಆರೋಪ ಮಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಯಾವುದೇ ವಿಷಯಗಳ ಚರ್ಚೆಯೇ ಆಗುವುದಿಲ್ಲ. ಸಭೆಯ ಆಡಿಯೊ, ವಿಡಿಯೊ ರೆಕಾರ್ಡ್ ಆಗುವುದಿಲ್ಲ. ಸಭೆ ಮುಗಿದ ಬಳಿಕ ತಮಗೆ ಅನುಕೂಲವಾಗುವ ರೀತಿಯಲ್ಲಿ ಗೊತ್ತುವಳಿ ಬರೆಯಲಾಗುತ್ತದೆ. ಗೊತ್ತುವಳಿ ಪ್ರತಿ ಕೇಳಿದರೆ ಆಯುಕ್ತರು ಅಧ್ಯಕ್ಷರ ಮನೆಯಲ್ಲಿ ಇದೆ ಎಂದು ಉತ್ತರಿಸುತ್ತಾರೆ. ಕಚೇರಿ ದಾಖಲೆಗಳು ಅಧ್ಯಕ್ಷರ ಮನೆಯಲ್ಲಿ ಏಕೆ ಇಡಬೇಕು. ಅಧಿಕಾರಿಗಳಿಗೆ ಹೊಣೆಗಾರಿಕೆ ಇಲ್ಲವೆ ಎಂದು ಪ್ರಶ್ನಿಸಿದರು.

ಯಾವುದೇ ಸಭೆ ಕರೆಯುವ ಮೊದಲು ಅಜೆಂಡಾ ಕೊಡಬೇಕು. ಆದರೆ ಅಜೆಂಡಾದಲ್ಲಿ ಖಾಲಿ ನಿವೇಶನ ಮಾರಾಟ ಮಾಡುವ ವಿಷಯವೇ ಇರಲಿಲ್ಲ. ಆದರೂ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಲಾಗಿದೆ ಎಂದರು.

ಸಾರ್ವಜನಿಕರು ನನ್ನ ಗಮನಕ್ಕೆ ತಂದ ತಕ್ಷಣ ನಾನು ಹೈಕೋರ್ಟ್ ಮೊರೆ ಹೋಗಿ ಜನ ಸಾಮಾನ್ಯರಿಗೆ ತೊಂದರೆ ಆಗುವುದನ್ನು ತಡೆಯಲು ಪ್ರಯತ್ನಿಸಿದ್ದೇನೆ ಎಂದು ಹೇಳಿದರು.