ಬುಗುಡನಹಳ್ಳಿ ಕೆರೆಗೆ ಹರಿದ ಹೇಮಾವತಿ ನೀರು: ಸರ್ಕಾರಕ್ಕೆ ಅಭಿನಂದನೆ

ತುಮಕೂರು, ಜು. ೧೮- ನಗರಕ್ಕೆ ಕುಡಿಯುವ ನೀರಿನ ಉದ್ದೇಶಕ್ಕೆ ಗೊರೂರು ಜಲಾಶಯದಿಂದ ಬುಗುಡನಹಳ್ಳಿ ಕೆರೆಗೆ ನೀರನ್ನು ಹರಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿದ ಬಸವರಾಜ ಬೊಮ್ಮಾಯಿ ರವರಿಗೆ ನಗರದ ಜನತೆಯ ಪರವಾಗಿ ಹಾಗೂ ಮಹಾನಗರಪಾಲಿಕೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದ್ದಾರೆ.
ನಂತರ ಮಾತನಾಡಿದ ಶಾಸಕ ಜ್ಯೋತಿಗಣೇಶ್, ತುಮಕೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯಿಲ್ಲ ಏಕೆಂದರೆ, ನಗರಕ್ಕೆ ಹೇಮಾವತಿ ನೀರು ಬಂದಿದೆ. ಹೇಮಾವತಿ ಕಾಲುವೆ ಆಧುನೀಕರಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕಾರಣ. ಅವರು ಈ ಹಿಂದೆ ೫೦೦ ಕೋಟಿ ಹಾಗೂ ಪ್ರಸ್ತುತ ೫೨೦ ಕೋಟಿ ಅನುದಾನವನ್ನು ೭೨ ಕಿ.ಮೀ.ನಿಂದ ೧೬೭ನೇ ಕಿ.ಮೀ ವರೆಗೆ ನೀಡಿದ್ದು, ಇತ್ತೀಚೆಗೆ ಬುಗುಡನಹಳ್ಳಿ ಕೆರೆಯಲ್ಲಿ ಕೇವಲ ೮೦ ಎಂ.ಸಿ.ಎಫ್.ಟಿ. ಯಷ್ಟು ಮಾತ್ರ ನೀರು ಇತ್ತು. ಇದು ನಗರಕ್ಕೆ ಇನ್ನು ಸುಮಾರು ೨೫ ದಿನಗಳಿಗೆ ಮಾತ್ರ ಉಪಯೋಗವಾಗುತ್ತಿತ್ತು ಎಂದರು.
ಪ್ರತಿನಿತ್ಯ ನಗರಕ್ಕೆ ೨ ಎಂ.ಸಿ.ಎಫ್.ಟಿ ಕುಡಿಯುವ ನೀರು ಅವಶ್ಯಕವಿದ್ದು, ಬುಗುಡನಹಳ್ಳಿ ನೀರಿನ ಸಾಮರ್ಥ್ಯ ೩೫೦ ಎಂ.ಸಿ.ಎಫ್.ಟಿ ಇದೆ. ಇದರೊಂದಿಗೆ ಹೆಬ್ಬಾಕ ಕೆರೆ ಇದ್ದು, ನಗರದ ಅಮಾನಿಕೆರೆ, ಗಂಗಸಂದ್ರ ಕೆರೆ ನೀರು ತುಂಬಿಸಿದ್ದು, ಅದನ್ನು ಉಪಯೋಗಿಸಲು ಸಾಧ್ಯವಿಲ್ಲ. ಕಾರಣ ರಾಜಗಾಲುವೆ ಒತ್ತುವರಿ ಮಾಡಿ ಕಲುಷಿತ ನೀರು ಕೆರೆಗೆ ಹರಿಯುತ್ತಿರುವುದರಿಂದ ಅದನ್ನು ಶುದ್ಧೀಕರಣಗೊಳಿಸಿದರು ಉಪಯೋಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ವಿವಿಧ ಹಂತದಲ್ಲಿ ನೀರನ್ನು ಪರೀಕ್ಷಿಸಿ, ಶುದ್ಧೀಕರಣಗೊಳಿಸಲು ಸಭೆ ಕರೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪಿ.ಎನ್.ಆರ್ ಪಾಳ್ಯದ ಶುದ್ಧೀಕರಣ ಘಟಕಕ್ಕೆ ನೀರು ಪಂಪು ಮಾಡಿ, ಶುದ್ಧೀಕರಿಸಿ ಕುಡಿಯುವ ನೀರಿಗೆ ಅನುಕೂಲ ಮಾಡಲಾಗುವುದು ಎಂದರು.
ಬುಗುಡನಹಳ್ಳಿ ಕೆರೆಗೆ ನೀರು ಹರಿಸಲು ಸಹಕರಿಸಿದ ಸಚಿವ ಜೆ.ಸಿ.ಮಾಧುಸ್ವಾಮಿರವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಾದ ಅರಗ ಜ್ಞಾನೇಂದ್ರ, ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಗೋಪಾಲಯ್ಯ, ಸಂಸದ ಜಿ.ಎಸ್.ಬಸವರಾಜು, ಜಿಲ್ಲೆಯ ಶಾಸಕರು ಹಾಗೂ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜೈಪ್ರಕಾಶ್ ರವರಿಗೂ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಬಿ.ಜಿ. ಕೃಷ್ಣಪ್ಪ, ಸದಸ್ಯರಾದ ವಿಷ್ಣುವರ್ಧನ, ಮಲ್ಲಿಕಾರ್ಜುನ್, ನಾಮಿನಿ ಸದಸ್ಯರಾದ ಮೋಹನ್, ಶಿವರಾಜು, ವಿಶ್ವನಾಥ್, ತ್ಯಾಗರಾಜ ಸ್ವಾಮಿ, ಪಾಲಿಕೆ ಆಯುಕ್ತರಾದ ರೇಣುಕಾ, ಮುಖಂಡರಾದ ಇಂದ್ರಕುಮಾರ್, ಮನೋಹರಗೌಡ ಉಪಸ್ಥಿತರಿದ್ದರು.