ಬುಕ್ಕಾಂಬುಧಿ ತಪೋಕ್ಷೇತ್ರದಲ್ಲಿ ಶ್ರಾವಣ ನಿತ್ಯ ವಿಶೇಷ ಪೂಜೆ

ಸಂಜೆವಾಣಿ ವಾರ್ತೆ

ಬಾಳೆಹೊನ್ನೂರು.ಆ.೧೮; ಅಜ್ಜಂಪುರ ತಾಲೂಕಿನ ಬುಕ್ಕಾಂಬುಧಿಯ ಬೆಟ್ಟದ ಮೇಲೆ ತಪಗೈದ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳವರ ಮಂಗಲ ಮೂರ್ತಿಗೆ ಶ್ರಾವಣ ನಿತ್ಯ ವಿಶೇಷ ಪೂಜೆ ಜರುಗುವುದೆಂದು ಶ್ರೀಮದುಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಪ್ರಕಟಪಡಿಸಿದರು. ಜನ ಕಲ್ಯಾಣಕ್ಕಾಗಿ ನಾಡಿನ ಅಭಿವೃದ್ಧಿಗಾಗಿ ಬುಕ್ಕಾಂಬುಧಿ ಬೆಟ್ಟದ ಗವಿಯಲ್ಲಿ ಹಲವಾರು ತಿಂಗಳ ಕಾಲ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಪೋನುಷ್ಠಾನಗೈದು ಉದ್ಧರಿಸಿದ ಇತಿಹಾಸವಿದೆ. ನಾಡಿನ ಉದ್ದಗಲಕ್ಕೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಶ್ರಾವಣ ಮಾಸದ ಅಂಗವಾಗಿ ನಿತ್ಯ ರುದ್ರಾಭಿಷೇಕ, ಅಷ್ಟೋತ್ತರ ಮಹಾಮಂಗಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪವಿತ್ರ ಶ್ರಾವಣ ಮಾಸದಲ್ಲಿ ಶ್ರೀ ಸಿದ್ಧಲಿಂಗ ಜಗದ್ಗುರುಗಳ ಮಂಗಲ ಮೂರ್ತಿಗೆ ಪೂಜಾಭಿಷೇಕ ನೆರವೇರಿಸಲು ಅವಕಾಶವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಇದರ ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕೆAದು ಕರೆ ನೀಡಿದರು.ಟ್ರಸ್ಟಿನ ಉಪಾಧ್ಯಕ್ಷ ವೀರಭದ್ರಪ್ಪ, ಕಾರ್ಯದರ್ಶಿ ಸುರೇಶ ಇನ್ನಿತರ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀ ರಂಭಾಪುರಿ ಜಗದ್ಗುರುಗಳು ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳವರ ಮಂಗಲ ಮೂರ್ತಿಗೆ ಬುಧವಾರ ವಿಶೇಷ ಪೂಜೆ ಸಲ್ಲಿಸಿ ಶ್ರಾವಣ ಮಾಸದ ಪೂಜೆಗೆ ಚಾಲನೆಯಿತ್ತರು.