ಬುಂಕಲದೊಡ್ಡಿ : ರಕ್ತದಾನ ಶಿಬಿರ-ಆದನಗೌಡ ಪಾಟೀಲ್

ದೇವದುರ್ಗ.ಜು.೧೩- ಯುವಕರು ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವ ಉಳಿಸಲು ಮುಂದಾಗಬೇಕು. ರಕ್ತದಾನ ಎಲ್ಲ ದಾನಗಳಲ್ಲಿ ಶ್ರೇಷ್ಠವಾದದ್ದು. ಆರೋಗ್ಯವಂತ ಯುವಕರು ವರ್ಷದಲ್ಲಿ ನಾಲ್ಕುಸಲ ರಕ್ತದಾನ ಮಾಡಬಹುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದನಗೌಡ ಪಾಟೀಲ್ ಬುಂಕಲದೊಡ್ಡಿ ಹೇಳಿದರು.
ಸಮೀಪದ ಬುಂಕಲದೊಡ್ಡಿ ಗ್ರಾಮದಲ್ಲಿ ಶ್ರೀತಿಮ್ಮಪ್ಪ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಂಕಲದೊಡ್ಡಿ ಯುವಕ ಮಿತ್ರರು ಹಾಗೂ ರಾಯಚೂರು ರಕ್ತ ನಿಧಿ ಸಂಗ್ರಹಾಲಯ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಅಪಘಾತ, ಆಪರೇಷನ್, ಹೆರಿಗೆ ಸಮಯದಲ್ಲಿ ರಕ್ತದ ಅಗತ್ಯವಿದೆ. ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕೃತಕವಾಗಿ ರಕ್ತ ಉತ್ಪಾದನೆ ಮಾಡಲು ಬರುವುದಿಲ್ಲ. ಹೀಗಾಗಿ ಯುವಕರು ಹೆಚ್ಚಾಗಿ ರಕ್ತದಾನ ಮಾಡಬೇಕು ಎಂದು ಹೇಳಿದರು.
ಶಿಬಿರದಲ್ಲಿ ೪೦ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು. ಗ್ರಾಪಂ ಸದಸ್ಯರಾದ ತಿಮ್ಮಾರಡ್ಡಿ ಮಾಲಿಪಾಟೀಲ್, ತಿಮ್ಮಣ್ಣ ಕಕ್ಕೇರಿ, ಯುವಕರಾದ ಮಹಾದೇವ ಪಾಟೀಲ್, ಹನುಮಂತ ಆಗಳದಾಳ, ಶ್ರೀಶೈಲ ಗಬ್ಬೂರು, ಬಸವಲಿಂಗ ಸ್ವಾಮಿ, ವೀರೇಶ ಪಾಟೀಲ್ ಜಾಲಹಳ್ಳಿ, ತಿಮ್ಮಾರಡ್ಡಿ ಕಾವಲಿ, ಮಾಳಪ್ಪ, ಬಸವರಾಜ ಗಣಜಲಿ ಮನೋಹರ, ಯಂಕಣ್ಣ ಬೊಂಬಾಯಿ, ಮಹೇಶ ಕುಂಬಾರ ಇತರರಿದ್ದರು.