(ಸಂಜೆವಾಣಿ ವಾರ್ತೆ)
ಗದಗ, ಜು.19: ಸರ್ಕಾರಿ ಕೆಲಸದಲ್ಲಿ ಇಂದಿನ ಕೆಲಸ ಇಂದೇ ಮಾಡಬೇಕು. ನಾಳೆಯ ಕೆಲಸವೂ ಇಂದೇ ಮಡಬೇಕು ಎಂಬ ಮನೋಭಾವವನ್ನು ಎಲ್ಲ ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳು ಹೊಂದಬೇಕು ಎಂದು ನಿರ್ಗಮಿತ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ ನುಡಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 2022 ಏಪ್ರೀಲ 17 ರಂದು ಗದಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದೆ. ತದ ನಂತರ ಸ್ವಲ್ಪ ದಿನಗಳ ಕಾಲ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅಧಿಕ ಮಳೆಯಿಂದಾಗಿ ನೆರೆಯಂತಹ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ನೆಮ್ಮದಿ ಇದೆ ಎಂದರು. ಅತ್ಯಂತ ಕಠಿಣವಾದಂತಹ ಕಾರ್ಯಗಳನ್ನು ಉತ್ತಮವಾದ ರೀತಿಯಲ್ಲಿ ಕೆಲಸ ಮಾಡಲು ಹೆಚ್ಚು ಒತ್ತು ನೀಡುತ್ತಿದ್ದೆ. ಕಳೆದ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳು ಯಶಸ್ವಿಯಾದವು. ಅಲ್ಲದೇ ಗ್ರಾಮ ಪಂಚಾಯತ ಕೊನೆಯ ವ್ಯಕ್ತಿಯು ಉತ್ತಮವಾಗಿ ಕಾರ್ಯನಿರ್ವಹಿಸದ್ದು ಸಂತಸ ತಂದಿದ್ದು ಇಂದು ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡು ಹೊಗುತ್ತಿರುವ ಸಂಗತಿ ಖುಷಿ ನೀಡಿದರೆ ನನ್ನ ಎಲ್ಲ ಕಾರ್ಯಗಳಿಗೂ ಉತ್ತಮ ಸಹಕಾರ ನೀಡಿದ ಜಿಲ್ಲೆಯ ಜನತೆ ಹಾಗೂ ಅಧಿಕಾರಿ, ಸಿಬ್ಬಂದಿಯನ್ನು ಬಿಟ್ಟು ಹೋಗುತ್ತಿರುವದು ದು:ಖದ ಸಂಗತಿಯಾಗಿದೆ ಎಂದು ಡಾ.ಸುಶೀಲಾ ಬಿ. ನುಡಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಮಾತನಾಡಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಹಾಗೂ ಶಾಂತಿ, ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪೆÇ?ಲಿಸ್ ಇಲಾಖೆ ಸಮನ್ವಯ ಅಗತ್ಯ. ಆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವದರ ಮೂಲಕ ಗದಗ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದು ಸಂತಸದ ಸಂಗತಿಯಾಗಿದೆ. ನಾವು ಯಾವುದೇ ಹುದ್ದೆ, ಸ್ಥಳಗಳಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು. ನಾವು ನಿವೃತ್ತಿ ಹೊಂದಿದ ನಂತರ ಎಲ್ಲರು ನಮ್ಮನ್ನು ಪ್ರೀತಿ ವಿಶ್ವಾಸದಿಂದ ಮಾತನಾಡಿಸುವಂತಹ ಕಾರ್ಯ ಮಾಡಬೇಕು ಎಂದ ಅವರು ತಮ್ಮ ಮುಂದಿನ ಜೀವನ ಚನ್ನಾಗಿರಲಿ ಎಂದು ಹಾರೈಸಿ ನಮ್ಮಿಬ್ಬರ ಸ್ನೇಹ ನಿತ್ಯ ನಿರಂತರ ಮುಂದುವರೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ ಜೆ ಸಿ ಮಾತನಾಡಿ ಡಾ. ಸುಶೀಲಾ ಮೇಡಮ್ ವರ್ಗಾವಣೆ ಒಂದು ರೀತಿ ಸಂತೋಷ ಹಾಗೂ ದುಃಖದ ಸಂಗತಿಯಾಗಿದೆ. ಮಾತೃ ಹೃದಯ ಹೊಂದಿದ್ದ ಅವರಲ್ಲಿ ಮಾನವೀಯತೆಯ ಮಮಕಾರ ಅಪಾರವಾಗಿರುವ ಅಧಿಕಾರಿಗಳು ಎಂದು ಬಣ್ಣಿಸಿದರು.
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಕುಂಬಾರ ಮಾತನಾಡಿ ಡಾ.ಸುಶೀಲಾ ಅವರು ತಾಯಿ, ಸೋದರಿ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಉತ್ತಮ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವದ್ದ ಅವರ ಆಡಳಿತ ಕಾರ್ಯ ವೈಖರಿ ನಾವೆಲ್ಲ ಅಳವಡಿಸಿಕೊಳ್ಳೊಣ ಎಂದರು.
ಜಿ.ಪಂ. ಸಹಾಯಕ ನಿರ್ದೇಶಕರಾದ ಸಂತೋಷ ಪಾಟೀಲ ಮಾತನಾಡಿ ಕರ್ತವ್ಯ ನಿರ್ವಹಣೆಯಲ್ಲಿ ಕಠೋರ ಹೃದಯ ಹೊಂದಿದ ಅವರು ಕಾನೂನುಗಳನ್ನು ಬಳಸಿ ಕೆಲಸ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ನರೇಗಾ, ಜೆಜೆಎಮ್ ಕಾಮಗಾರಿಗಳಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಿದ್ದು ಕೆಲಸದ ವಿಷಯದಲ್ಲಿ ರಾಜಿ ಮಾಡಿಕೊಳ್ಳದೇ ಜನಾಡಳಿತ ನೀಡಿ ಕೆಲಸದಲ್ಲಿ ಶಿಸ್ತು ಸಂಯಮ ನೀತಿ ನಿಯಮಗಳನ್ನು ಜಾರಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.