ಬೀರಲಿಂಗೇಶ್ವರ ದೇಗುಲ ಹಸ್ತಾಂತರಿಸಿದರೆ ಮೆಡಿಕಲ್ ಕಾಲೇಜು ಪ್ರಾರಂಭ

ಸಂಜೆವಾಣಿ ವಾರ್ತೆ
ಹೂವಿನಹಡಗಲಿ ಸೆ 20 :  ರಾಣೆಬೆನ್ನೂರು, ಮೇಡ್ಲೇರಿ ಮತ್ತು ಹುಲಿಕಟ್ಟಿಯಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನಗಳನ್ನು ಕಾಗಿನೆಲೆ ಕನಕ ಗುರುಪೀಠಕ್ಕೆ ಒಪ್ಪಿಸಿದರೆ ನಾವು ಪೀಠದಿಂದ ವೈದ್ಯಕೀಯ ಕಾಲೇಜು ಪ್ರಾರಂಭಿಸುತ್ತೇವೆ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿಸ್ವಾಮೀಜಿ ಹೇಳಿದರು.
ತಾಲೂಕಿನ ಹ್ಯಾರಡ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಸ್ಥಾನ ಭೂಮಿಪೂಜೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಬೀರಲಿಂಗೇಶ್ವರ ದೇವಾಲಯಗಳಿಗೆ ಭಕ್ತರಿಂದ ಪ್ರತಿವರ್ಷ ಕೋಟ್ಯಂತರ ರೂ. ದೇಣಿಗೆ ಸಂಗ್ರಹವಾಗುತ್ತಿದೆ.
ಆದರೆ ಅಲ್ಲಿನ ಕೆಲ ದೈವದವರು ತಮ್ಮ ಸ್ವಾರ್ಥಕ್ಕೆ ದೇಗುಲಗಳನ್ನು ಬಲಿಕೊಟ್ಟು, ಇಡೀ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಇದರಿಂದ ಆರ್ಥಿಕ ಸಂಪನ್ಮೂಲ ಸೋರಿಕೆಯಾಗುತ್ತಿದೆ. ಬೇಡುವ ನಾಲಿಗೆಗೆ ನಿಯತ್ತಿದ್ದರೆ ದಾನ ಕೊಡುವ ಕೈಗಳಿಗೆ ಕೊರತೆಯಿಲ್ಲ. ಆದ್ದರಿಂದ ಮೂರೂ ದೇಗುಲಗಳನ್ನು ಪೀಠಕ್ಕೆ ಬಿಟ್ಟುಕೊಟ್ಟರೆ ತಾವು ಮೆಡಿಕಲ್ ಕಾಲೇಜನ್ನು ಶೀಘ್ರವೇ ಆರಂಭಿಸುತ್ತೇವೆ ಎಂದರು. 
ಮಾಂಸಾಹಾರವನ್ನು ನಮ್ಮ ಆಹಾರ ಪದ್ಧತಿಗೆ ಬದಲಾಯಿಸಿಕೊಂಡು ಕುಟುಂಬಗಳು ಆರ್ಥಿಕವಾಗಿ ಸರ್ವನಾಶವಾಗುತ್ತಿವೆ. ನಮ್ಮ ಆಚರಣೆಗಳು ಸಂಪ್ರದಾಯಗಳಾಗಬೇಕೆ ಹೊರತು ಮೌಢ್ಯತೆಗೆ ಒಳಗಾಗಬಾರದು.  ಬಹುತೇಕ ದೇಗುಲಗಳಲ್ಲಿ ಇಂದಿಗೂ ಜಿಡ್ಡುಗಟ್ಟಿದ ಸಂಪ್ರದಾಯ,ಮೌಢ್ಯತೆ ತುಂಬಿ ತುಳುಕುತ್ತಿವೆ. ಹಳ್ಳಿಗಳಲ್ಲಿ ದೇಗುಲಗಳ ಗಂಟೆಗಿಂತ ಶಾಲೆ ಗಂಟೆ ಬಾರಿಸಿದರೆ ಜ್ಞಾನದ ಶಕ್ತಿ ಹೆಚ್ಚು ಜಾಗೃತಗೊಳ್ಳುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಗ್ರಾಮದಲ್ಲಿ ಬೀರಲಿಂಗೇಶ್ವರ ದೇಗುಲ ನಿರ್ಮಾಣಕ್ಕೆ ಸಂಕುಚಿತ ಮನೋಭಾವನೆ ತೊರೆದು ಸರ್ವ ಜನಾಂಗದವರೂ ಕೈಜೋಡಿಸಿ ಹೃದಯ ವೈಶಾಲ್ಯತೆ ಮೆರೆದಿರುವುದು ಶ್ಲಾಘನೀಯ. ಈ ದೇವಸ್ಥಾನಕ್ಕೆ 10 ಲಕ್ಷ ರೂ. ಅನುದಾನ ನೀಡುವುದಾಗಿ ಘೋಷಿಸಿದರು.
2018ರ ಚುನಾವಣೆಯಲ್ಲಿ ತಾವು 2ನೇ ಬಾರಿ ಜಯಿಸಿದ ಕೀರ್ತಿ  ಕಾಗಿನೆಲೆ ಕನಕ ಗುರುಪೀಠಕ್ಕೆ ಸಲ್ಲುತ್ತದೆ. ಜನಪ್ರತಿನಿಯಾದವರು ಜನರ ಬೇಡಿಕೆಗಳಿಗೆ ಸ್ಪಂದಿಸಬೇಕು. ಈ ಭಾಗದಲ್ಲಿ ಮಲಿಯಮ್ಮನ ಕೆರೆಗೆ ನೀರು ತುಂಬಿಸಿದಾಗ ಇಲ್ಲಿನ ಕೆಲ ಕುರಿಗಾಹಿಗಳು ಮೊಬೈಲ್ ಕರೆ ಮಾಡಿ ಕುರಿಗಳಿಗೆ ಕುಡಿವ ನೀರು ಒದಗಿಸಿ ತಮ್ಮ ಜೀವನವನ್ನು ಸುರಕ್ಷತೆಗೊಳಿಸಿದ್ದೀರಿ ಎಂದಾಗ  ತಾನು ಜನಪ್ರತಿನಿಯಾಗಿದ್ದು  ಸಾರ್ಥಕ ಎನಿಸಿತು ಎಂದರು.
ಮುಖಂಡ ಬಿ.ಹನುಮಂತಪ್ಪ, ತಾಲೂಕಿನ ನಾನಾ ಕಡೆ ಬಿರಲಿಂಗೇಶ್ವರ ದೇಗುಲಗಳು ನಿರ್ಮಾಣವಾಗಿವೆ. ಈಗಾಗಲೇ ಶ್ರೀಗಳ ಸಂಕಲ್ಪದಿಂದ ಸುಕ್ಷೇತ್ರ ಮೈಲಾರದಲ್ಲಿ ವಸತಿ ಶಾಲೆ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಶ್ರೀಗಳ ನಡೆ ಬಡವರ ಕಡೆ ಎಂದು ಸಾಬೀತಾಗಿದ್ದು, ಸಮಾಜ ಬಾಂಧವರು ಸ್ಪಂದಿಸಬೇಕಿದೆ ಎಂದರು.
ಬಿಇಒ ಪ್ರಕಾಶ,ನೀಲಪ್ಪ ಮಾತನಾಡಿದರು.
ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹೊಸ್ಕೇರಿ ಬೀರಪ್ಪ,ಎಂ.ಪರಮೇಶ್ವರಪ್ಪ, ಅಟವಾಳಿಗಿ ಕೊಟ್ರೇಶ, ಟಿ.ಮಹಾಂತೇಶ, ಪಿ.ಬಸಣ್ಣ, ಗ್ರಾ.ಪಂ. ಅಧ್ಯಕ್ಷೆ ರಣದಮ್ಮ, ಉಪಾಧ್ಯಕ್ಷ ಹೌಸಿ ಸಿದ್ದೇಶ ಹಾಗೂ ಇತರ ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು.
Attachments area