ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ : ಪೌರಾಯುಕ್ತ ಎಂ. ರಾಜಣ್ಣ

ಚಾಮರಾಜನಗರ,ನ.19: ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ಆನ್ ಲೈನ್ ನೊಂದಣಿ ಕಾರ್ಯದಲ್ಲಿ ಚಾಮರಾಜನಗರ ಶೇ.108 ರಷ್ಟು ಸಾಧನೆ ಮಾಡಿದೆ ಎಂದು ನಗರಸಭೆ ಪೌರಾಯುಕ್ತರಾದ ಎಂ.ರಾಜಣ್ಣ ಅವರು ತಿಳಿಸಿದರು.
ನಗರಸಭೆ ಕಚೇರಿಯಲ್ಲಿ ಗುರುವಾರದಂದು ಮಾಹಿತಿ ನೀಡಿದ ಅವರು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್ ಅವರ ಮಾರ್ಗದರ್ಶನದಲ್ಲಿ ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಈಗಾಗಲೇ 753 ಜನರಿಗೆ ಆನ್ ಲೈನ್ ನೊಂದಣಿ ಮಾಡಿಸುವ ಮೂಲಕ ಗುರಿ ಮೀರಿದ ಪ್ರಗತಿಯನ್ನು ಸಾಧಿಸಿದೆ ಎಂದು ತಿಳಿಸಿದರು.
ನಗರಸಭೆ ಯೋಜನಾಧಿಕಾರಿಗಳು,ಸಿಬ್ಬಂದಿಗಳು ಈ ಕಾರ್ಯದಲ್ಲಿ ಬೀದಿಬದಿ ವ್ಯಾಪಾರ ಸ್ಥಳಗಳು, ಎಪಿಎಂಸಿ,ತರಕಾರಿ ಮಾರುಕಟ್ಟೆ, ಹೂ,ತರಕಾರಿ, ಬಟ್ಟೆ ವ್ಯಾಪಾರಿಗಳ ಬಳಿ ಖುದ್ದು ತೆರಳಿ ಸಮೀಕ್ಷೆ ನಡೆಸಿ 699 ಜನರಿಗೆ ನೊಂದಣಿ ಗುರಿ ಹೊಂದಲಾಗಿತ್ತು. ಮುಂದುವರಿದು 753 ಮಂದಿ ಬೀದಿ ಬದಿ ವ್ಯಾಪಾರಿಗಳಿಗೆ ಬುಧವಾರದವರೆಗೆ ನೊಂದಣಿ ಮಾಡಿಸಲಾಗಿದೆ ಎಂದರು.
ನಗರಸಭೆ ಯೋಜನಾಧಿಕಾರಿ ವೆಂಕಟನಾಯ್ಕ ಅವರು ಮಾಹಿತಿ ನೀಡಿ ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕರು ಹಾಗೂ ಪೌರಾಯುಕ್ತರ ಮಾರ್ಗದರ್ಶನದಲ್ಲಿ ನೊಂದಣಿ ಮಾಡಿದ 753 ಮಂದಿ ಬೀದಿ ಬದಿ ವ್ಯಾಪಾರಿಗಳ ಪೈಕಿ ಬುಧವಾರದವರೆಗಿನ ಅಂಕಿಅಂಶದಂತೆ ಈಗಾಗಲೇ 21 ಜನರಿಗೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ದೊರೆತಿದೆ.81 ಜನರಿಗೆ ಸಾಲ ಮಂಜೂರಾಗಿದೆ. ಉಳಿದವರ ಅರ್ಜಿಗಳು ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳ ಆನ್ ಲೈನ್ ನೊಂದಣಿ ಪ್ರಕ್ರಿಯೆಯಲ್ಲಿ ನಗರಸಭೆ ಸಿಬ್ಬಂದಿಗಳಾದ ಸಂತೋμï, ನವೀನ್, ಕೋಮಲ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.