ಬೀದಿ ನಾಯಿ ಹಾವಳಿ ತಡೆಗೆ ೫ ಕೋಟಿ ಅನುದಾನ

ಬೆಂಗಳೂರು, ಮಾ. ೨೭- ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ೫ ಕೋಟಿ ರೂ. ಗಳ ಅನುದಾನವನ್ನು ಪಾಲಿಕೆ ಬಜೆಟ್‌ನಲ್ಲಿ ಮೀಸಲಿಡಲಾಗಿದೆ.
ಆಗಿಂದಾಗ್ಗೆ ಬೀದಿ ನಾಯಿಗಳ ಹಾವಳಿ ಕಾಟ ಹೆಚ್ಚಾಗುತ್ತಿದ್ದು, ಅದರಲ್ಲೂ ಮಕ್ಕಳ ಮೇಲೆ ಎರಗಿ ಕಚ್ಚುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲೂ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ೫ ಕೋಟಿ ಮೀಸಲಿಡಲಾಗಿದೆ.
ನಗರದ ಉದ್ಯಾನವನಗಳ ಮತ್ತಷ್ಟು ಸುಂದರಗೊಳಿಸಲು ಹಾಗೂ ನಿರ್ವಹಣೆಗೆ ವಾರ್ಡ್‌ವಾರು ಟೆಂಡರ್ ಮೂಲಕ ನೀಡಲು ನಿರ್ಧರಿಸಿದ್ದು ಪ್ರತಿ ಉದ್ಯಾನವನದ ನಿರ್ವಹಣೆ ಹೊತ್ತಿರುವ ಗುತ್ತಿಗೆದಾರರ ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ಪ್ರದರ್ಶಿಸಲು ಕ್ರಮಕೈಗೊಳ್ಳಲಾಗಿದೆ.
ಕೊರೊನಾ ನಿಯಂತ್ರಣಕ್ಕೆ ೩೩೭ ಕೋಟಿ
ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಸಕ್ರೀಯ ಪ್ರಕರಣಗಳು ಗಣನೀಯ ಏರಿಕೆಯಾಗುತ್ತಿದ್ದು, ವೈರಾಣು ನಿಯಂತ್ರಣಕ್ಕೆ ರಾಜ್ಯ ಸರ್ಕಾರದಿಂದ ೩೩೭ ಕೋಟಿ ರೂ. ಒದಗಿಸಲಾಗಿದೆ.
ಮನೆಗಳಲ್ಲಿ ಮತ್ತು ಮೇಲ್ಚಾವಣಿಯಲ್ಲಿ ತಯಾರಿಸಿದ ಕಾಂಪೋಸ್ಟ್ ಗೊಬ್ಬರದಿಂದ ತೋಟಗಾರಕಾ ಚಟುವಟಿಕೆಗಳನ್ನು ಉತ್ತೇಜಿಸಲು ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಲಾಗಿದ್ದು, ಮನೆಯಲ್ಲಿ ತಯಾರಿಸಿದ ಕಾಂಪೋಸ್ ಗೊಬ್ಬರ ಬಳಸಿ, ಉತ್ತಮ ಮೇಲ್ಛಾವಣಿ ಮನೆಯ ಉದ್ಯಾನವನಕ್ಕಾಗಿ ವಲಯ ಮಟ್ಟದಲ್ಲಿ ಸ್ಪರ್ಧೆ ಆಯೋಜಿಸಿ ಪ್ರತಿ ವಲಯಕ್ಕೆ ೧ಲಕ್ಷ ಬಹುಮಾನ ನೀಡುವ ಹೊಸ ಯೋಜನೆಯನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ.
ಬೆಂಗಳೂರು ನಗರ ಎಲ್ಲಾ ದೀಪಗಳನ್ನು ಎಲ್‌ಇಡಿ ಬಲ್ಬ್‌ಗಳಾಗಿ ಪರಿವರ್ತನೆ ಮಾಡಲು ಮೊದಲ ಹಂತದಲ್ಲಿ ೧ಲಕ್ಷ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುವುದು. ಸಮಗ್ರ ಸಂಚಾರ ವ್ಯವಸ್ಥೆಗೆ ನಿರ್ವಹಣೆಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದ್ದು, ಹೈ-ಡೆನ್ಸಿಟಿ ಕಾರಿಡಾರ್ ಉನ್ನತೀಕರಣ, ಮೆಟ್ರೋ ರೈಲು ಮಾರ್ಗಗಳ ವಿಸ್ತರಣೆ ಉಪನಗರಗಳ ರೈಲು ಕಾರ್ಯಗತಗೊಳಿಸಲು ಯೋಜನೆ ರೂಪಿಸಲಾಗಿದೆ.
ದೀರ್ಘಕಾಲದಿಂದ ಚಾಲ್ತಿಯಲ್ಲಿರುವ ಯೋಜನೆಗಳಾದ ಸ್ಮಾಟ್ ಸಿಟಿ ರಸ್ತೆಗಳು, ವೈಟ್ ಟಾಪಿಂಗ್ ಮತ್ತು ಟೆಂಡರ್ ಶ್ಯೂರ್ ಯೋಜನೆಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಒದಗಿಸಲಾಗುವುದು. ವಾಹನ ದಟ್ಟಣೆಯನ್ನು ನಿವಾರಿಸಲು ಈಗಾಗಲೇ ಅನುಮೋದನೆ ಗೊಂಡಿರುವ ಗ್ರೇಡ್ ಸಪರೇಟರ್ ಯೋಜನೆಗಳಿಗೆ ವೇಗ ನೀಡಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲು ಪಾಲಿಕೆ ಮುಂದಾಗಿದೆ.