ಬೀದಿ ನಾಯಿ ಕಡಿದು ಆಸ್ಪತ್ರೆಗೆ ದಾಖಲಾಗಿರುವ ಬಾಲಕಿ ಕುಟುಂಬಕ್ಕೆ ಶಾಸಕ ಅಲ್ಲಂಪ್ರಭು ಪಾಟೀಲ್ ಸಾಂತ್ವನ

ಕಲಬುರಗಿ:ಡಿ.30:ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 41ರಲ್ಲಿ ಬರುವ ಮುಜಬಾ ನಗರದಲ್ಲಿ ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿಗೊಳಗಾಗಿ ಜೀವನ್ಮರಣ ಹೋರಾಟ ನಡೆಸುತ್ತ ಕಳೆದ 4 ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ಸಪುರಾಕುಲಸಮ್ (6) ಇವಳ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಸಾಂತ್ವನ ಹೇಳಿದರು.

ಇಲ್ಲಿನ ಯೂನೈಟೆಡ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಾಲಕಿಗೆ ಯೋಗ್ಯ ಚಿಕಿತ್ಸೆ ಕೊಡಬೇಕು, ಅವಳನ್ನು ಆದಷಟು ಬೇಗ ಗುಣಮುಖಳಾಗುವಂತೆ ಮಾಡಬೇಕೆಂದು ಶಾಸಕರು ವೈದ್ಯರಿಗೆ ಸೂಚಿಸಿದರು.

ಬಾಲಕಿಯ ತಂದೆ ರಿಯಾಜ್ ಅಲಿ ಹಾಗೂ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಶಾಸಕರು ಬೀದಿನಾಯಿ ಹಾವಳಿ ತಡೆಗಟ್ಟಲು ಪಾಲಿಕೆಯವರಿಗೆ ಸೂಚಿಸಲಾಗಿದೆ. ಬರುವ ದಿನಗಳಲ್ಲಿ ಇಂತಹ ಪ್ರಕರಣಗಳು ಪುನಃ ಮುಕಳಿಸದಂತೆ ಅತ್ಯ ಕ್ರಣಕ್ಕೆ ತಾವು ಸೂಚಿಸಿದ್ದಾಗಿ ಹೇಳಿದರು.
ಡಿ.27ರಂದು ಸಂಜೆ ತಮ್ಮ ಮಗಳು ಮನೆಯ ಮುಂದೆ ಆಟವಾಡುತ್ತಿದ್ದಾಗ ಬೀದಿ ನಾಯಿಗಳು ಆಕೆಯ ಮೇಲೆ ದಾಳಿ ನಡೆಸಿ ಗದ್ದ ಮತ್ತು ಗಂಟಲಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ. ಈ ವಿಷಯವನ್ನು 41ನೇ ವಾರ್ಡ್ ಸದಸ್ಯೆ ಇರ್ಫಾನ್ ಪರ್ವಿನ್ ಮತ್ತು 27ರ ಸದಸ್ಯ ಸಾಜೀದ್ ಕಲ್ಯಾಣಿ ಅವರ ಗಮನಕ್ಕೆ ತಂದಾಗ ಅವರು ತಕ್ಷಣವೇ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಲ್ಲಿ ನೆರವಾಗಿದ್ದಾರೆ ಎಂದು ಮಗುವಿನ ತಂದೆಯವರು ತಿಳಿಸಿದರು.

ಬೀದಿನಾಯಿಗಳ ಹಾವಳಿ ತಡೆಯುವಲ್ಲಿ ಮತ್ತು ಅವುಗಳನ್ನು ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸುವ ಕೆಲಸ ಮಾಡದೆ ನಿರ್ಲಕ್ಷ್ಯ ವಹಿಸಿರುವ ಪಾಲಿಕೆ ವಿರುದ್ಧ ಬಾಲಕಿಯ ಪರಿವಾರದವರು ಕೋಪತಾಪ ಹೊರಹಾಕಿದರಲ್ಲದೆ ಅಗತ್ಯ ಕ್ರಮಕ್ಕೆ ಸೂಚಿಸುವಂತೆ ಶಾಸಕರಾ ದ ಅಲ್ಲಂಪ್ರಭು ಪಾಟೀಲರಿಗೆ ಕೋರಿದರು.

ಈಗಾಗಲೇ ಈ ಸಂಗತಿ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಚರ್ಚೆಗೊಳಗಾಗಿದೆ. ಬಾಲಕಿಗೆ 5 ಲಕ್ಷ ರು ಪರಿಹಾರ ಹಣವೂ ಕೊಡುವಂತೆ ಸಭೆಯಲ್ಲಿ ಠರಾವು ಪಾಸಾಗಿದೆ. ಶೀಘ್ರದಲ್ಲಿ ಪರಿಹಾರ ಧನ ಬಾಲಕಿ ಕುಟುಂಬದ ಕೈ ಸೇರಲಿದೆ.