ಬೀದಿ ನಾಯಿಗಳ ಹಾವಳಿ ತಡೆಗಟ್ಟಬೇಕೆಂದು ಆಗ್ರಹಿಸಿ ಪುರಸಭೆ ಮುಂದೆ ಪ್ರತಿಭಟನೆ

ಇಂಡಿ:ಮಾ.13:ಪುರಸಭೆ ವ್ಯಾಪ್ತಿಯಲ್ಲಿ ಬರುವ ಚವಡಿಹಾಳ ರಸ್ತೆಯ ಪುರಸಭೆಯ ಘನತ್ಯಾಜ್ಯ ವಸ್ತುಗಳ ಸಂಗ್ರಹದ ಸುತ್ತಮುತ್ತಲು ಇರುವ ಜನವಸತಿ ಪ್ರದೇಶಗಳಿಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಹಲವು ಕುರಿ,ಮೆಕೆಗಳು ಬಲಿಯಾಗಿದ್ದು, ವಸತಿ ಪ್ರದೇಶದ ಜನರು ಭಯಬೀತರಾಗಿದ್ದು,ಕೂಡಲೆ ಬೀದಿ ನಾಯಿಗಳನ್ನು ಬೇರೆಡೆಗೆ ಸಾಗಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಪಟ್ಟಣದ ಪುರಸಭೆಯ ಮುಂದೆ ನಾಯಿಗಳ ದಾಳಿಯಿಂದ ಸಾವನಪ್ಪಿದ ಕುರಿ,ಮೆಕೆಗಳನ್ನು ಪುರಸಭೆ ಆವರಣದ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು.
ಕಳೆದ 6 ತಿಂಗಳ ಹಿಂದೆ ಇದೇ ಬೀದಿ ನಾಯಿಗಳು ಐದಾರು ಕುರಿ,ಮೆಕೆಗಳಿಗೆ ಕಚ್ಚಿ ಸಾವುಪಡಿಸಿದ್ದವು,ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗದೇ ಇರುವುದರಿಂದ ಮತ್ತೇ ನಾಯಿ ದಾಳಿಗೆ 3 ಕುರಿ,ಮೆಕೆಗಳು ಸಾವನಪ್ಪಿವೆ. ಪುರಸಭೆಯ ಘನತ್ಯಾಜ್ಯ ವಸ್ತುಗಳ ಸಂಗ್ರಹಾಲಯದಲ್ಲಿ ಪಟ್ಟಣದಲ್ಲಿ ಸಾವನಪ್ಪಿದ್ದ ಹಂದಿ ಇತರೆ ಪ್ರಾಣಿಗಳನ್ನು ತಂದು ಇಲ್ಲಿಯೇ ಬಿಸಾಕುತ್ತಿರುವುದರಿಂದ ಬೀದಿ ನಾಯಿಗಳು ಇಲ್ಲಿ ಬಿಸಾಕಿದ ಹಂದಿಗಳನ್ನು ತಿಂದು ಕೊಬ್ಬಿ ಗೂಳಿಯಂತೆ ಬೆಳೆದು ಬಿಟ್ಟಿವೆ. ಹೀಗಾಗಿ ಜನರ ಭಯ ನಾಯಿಗಳಿಗೆ ಇಲ್ಲವಾದುದ್ದರಿಂದ ಜನರ ಮುಂದೆಯೇ ಕುರಿ,ಮೆಕೆಗಳನ್ನು ಕಚ್ಚಿ ತಿನ್ನುತ್ತಿವೆ. ಹೀಗಾದರೆ ಮನೆಯಲ್ಲಿ ಸಣ್ಣ ಮಕ್ಕಳು ಇರುವುದರಿಂದ ಅವರ ಪ್ರಾಣಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ,ಇಷ್ಟಾದರೂ ಸಹ ಪುರಸಭೆ ಅಧಿಕಾರಿಗಳು ನಾಯಿಗಳಿಗೆ ಬೇರೆಡೆಗೆ ಸಾಗಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ವಸತಿ ಪ್ರದೇಶದ ಸಾರ್ವಜನಿಕರು ಆರೋಪಿಸಿದ್ದಾರೆ.
ಕೂಡಲೆ ಬೀದಿ ಚವಡಿಹಾಳ ರಸ್ತೆಯ ಪುರಸಭೆಯ ಘನತ್ಯಾಜ್ಯ ವಸ್ತು ಸಂಗ್ರಹಲಾಯದ ಬಳಿ ಇರುವ ಬೀದಿ ನಾಯಿಗಳನ್ನು ಬೇರೆಡೆಗೆ ಸಾಗಿಸಬೇಕು.ಇಲ್ಲವಾದರೆ ನಾಯಿಗಳು ಘನತ್ಯಾಜ್ಯ ವಸ್ತು ಸಂಗ್ರಹಾಲಯದ ಒಳಗೆ ಹೋಗಿ ಸತ್ತ ಹಂದಿ,ಪ್ರಾಣಿಗಳನ್ನು ತಿನ್ನದಂತೆ ಕ್ರಮ ಕೈಗೊಳ್ಳಬೇಕು.ಕ್ರಮ ಕೈಗೊಳ್ಳಲು ವಿಳಂಬ ಮಾಡಿದರೆ, ಘನತ್ಯಾಜ್ಯ ವಸ್ತು ಸಂಗ್ರಹಾಲಯಕ್ಕೆ ಬೀಗ ಹಾಕುವುದರ ಜೊತೆಗೆ ,ಪುರಸಭೆಯ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ. ಇನ್ನೂ ಮುಂದೆ ಬೀದಿ ನಾಯಿಗಳಿಂದ ಕುರಿ,ಮೆಕೆಗಳಿಗಾಗಲಿ,ಜನರಿಗಾಗಲಿ ತೊಂದರೆ ಆದರೆ ಅದಕ್ಕೆ ಪುರಸಭೆಯೇ ನೇರ ಹೊಣೆಯನ್ನಾಗಿ ಮಾಡಲಾಗುತ್ತದೆ ಎಂದು ಅವರು ಮನವಿಯಲ್ಲಿ ಎಚ್ಚರಿಸಿದ್ದಾರೆ.
ನಂತರ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಅವರಿಗೆ ಮನವಿ ಸಲ್ಲಿಸಿದರು.
ಪ್ರಶಾಂತ ಲಾಳಸಂಗಿ, ಅಶೋಕ ಅಕಲಾದಿ, ರಾಚು ಬಡಿಗೇರ, ಮಲ್ಲಿಕಾರ್ಜುನ ಗುಡ್ಲ, ಶ್ರೀಶೈಲ ಪೂಜಾರಿ, ಮಹೇಶ ಹೂಗಾರ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.