
ಲಕ್ಷ್ಮೇಶ್ವರ,ಜು.10:ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು ಇದರಿಂದಾಗಿ ಅಂಗನವಾಡಿಗೆ ಹೋಗುವ ಚಿಕ್ಕ ಮಕ್ಕಳು ವಿದ್ಯಾರ್ಥಿಗಳು ಸಾಮಾನ್ಯರು ಯಾವ ವೇಳೆಯಲ್ಲಿ ನಾಯಿಗಳು ಆಕ್ರಮಣ ಮಾಡುತ್ತವೆಯೋ ಎಂಬ ಭೀತಿಯಲ್ಲಿ ಅಡ್ಡಾಡುತ್ತಿದ್ದಾರೆ.
ಪಟ್ಟಣದ ಪ್ರಮುಖ ರಸ್ತೆಗಳಾದ ಹಳೆ ಬಸ್ ನಿಲ್ದಾಣ ಹೊಸ ಬಸ್ ನಿಲ್ದಾಣ ಶಿಗ್ಲಿ ನಾಕ ಸವಣೂರ ರಸ್ತೆ ಪಂಪ ವೃತ್ತ ವಿದ್ಯಾರಣ್ಯ ವೃತ್ತ ಪುರಸಭೆ ಹಿಂಬಾಗ ಸೋಮೇಶ್ವರ ದೇವಸ್ಥಾನದ ಹತ್ತಿರ ಸೇರಿದಂತೆ ಅನೇಕ ಕಡೆ ವಿಪರೀತವಾಗಿ ನಾಯಿಗಳ ಹಾವಳಿ ಹೆಚ್ಚಾಗಿದೆ.
ಮುಂಜಾನೆ ಬಹುತೇಕ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗುವ ಸಮಯದಲ್ಲಿ ಹಿಂಡು ಹಿಂಡಾಗಿ ನಾಯಿಗಳು ಪ್ರಮುಖ ರಸ್ತೆಗಳಲ್ಲಿ ಒಂದಕ್ಕೊಂದು ಕಚ್ಚಾಡುತ್ತಾ ಶರವೇಗದಿಂದ ಓಡೋಡಿ ಬರುತ್ತಿರುವುದರಿಂದ ರಕ್ಷಣೆಗಾಗಿ ವಿದ್ಯಾರ್ಥಿಗಳು ಭಯಭೀತರಾಗಿ ಓಡಾಡುತ್ತಿದ್ದಾರೆ.
ಅನೇಕ ಕಡೆ ನಾಯಿಗಳು ಮಕ್ಕಳನ್ನು ಎಳೆದಾಡಿ ಕಚ್ಚಿದ ಉದಾಹರಣೆಗಳು ಮನುಷ್ಯರ ಮೇಲೆ ಆಕ್ರಮಣ ಮಾಡಿದ ಉದಾಹರಣೆಗಳು ಇರುವಾಗ ಪುರಸಭೆಯವರು ಕೂಡಲೇ ಬೀದಿ ನಾಯಿಗಳನ್ನು ಬೇರಡೆಗೆ ಸ್ಥಳಾಂತರಿಸುವ ಬಗ್ಗೆ ಮುಂದಾಗಬೇಕು ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ.
ಈ ಕುರಿತು ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್ ಮುದುಗಲ್ ಅವರು ಪ್ರತಿಕ್ರಿಯೆ ನೀಡಿ ಬೀದಿ ನಾಯಿಗಳನ್ನು ಹಿಡಿಯಲು ಇಷ್ಟರಲ್ಲಿಯೇ ಟೆಂಡರ್ ಕರೆಯಲಾಗುತ್ತಿದೆ. ಪಾಣಿ ಹತ್ಯೆ ನಿಷೇಧದ ಹಿನ್ನೆಲೆಯಲ್ಲಿ ನಾಯಿಗಳನ್ನು ಹಿಡಿಯುವ ಇಲ್ಲವೇ ಸಂತಾನ ಹರಣ ಚಿಕಿತ್ಸೆಗೆ ಒಳಪಡಿಸುವುದು ಒಂದೇ ಮಾರ್ಗವಾಗಿದೆ ಎಂದು ಹೇಳಿದ್ದಾರೆ.