
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಫೆ.22: ಪಟ್ಟಣದಲ್ಲಿ ಇತ್ತೀಚೆಗೆ ಬೀದಿ ನಾಯಿ ಹಾಗೂ ಬಿಡಾಡಿ ಜಾನುವಾರುಗಳಿಂದ ಜನತೆಗೆ ತೊಂದರೆಯಾಗುತ್ತಿದ್ದು, ಅವುಗಳ ಉಪಟಳವನ್ನು ನಿಯಂತ್ರಿಸಲು ಮುಂದಾಗಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ನಾ.ಗೌ) ಹೋಬಳಿ ಘಟಕದ ಕಾರ್ಯಕರ್ತರು ಪ. ಪಂ. ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಮುಖ್ಯ ಬೀದಿಯಲ್ಲಿ ಬಿಡಾಡಿ ಜಾನುವಾರುಗಳ ಹಾವಳಿಯಿಂದ ವಾಹನ ಸಂಚಾರಕ್ಕೆ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇವುಗಳ ಉಪಟಳದಿಂದ ಅನೇಕ ಅವಘಡಗಳು ಸಂಭವಿಸಿವೆ. ಅಲ್ಲದೇ ದ್ವಿ ಚಕ್ರ ವಾಹನಗಳ ಬ್ಯಾಗ್‌ಗಳಲ್ಲಿನ ಆಹಾರ ಪದಾರ್ಥಗಳು ಹಾಗೂ ಮುಖ್ಯವಾದ ದಾಖಲೆಗಳೂ ಕೂಡ ಹಾಳಾದ ನಿದರ್ಶನಗಳಿವೆ.
ಅಲ್ಲದೇ ಪಟ್ಟಣದ 12ನೇ ವಾರ್ಡಿನಲ್ಲಿ ಹುಚ್ಚು ನಾಯಿಯು ಓರ್ವ ವಿದ್ಯಾರ್ಥಿ, ಮಹಿಳೆ ಸೇರಿದಂತೆ ಸುಮಾರು 6-7 ನಾಗರಿಕರ ಮೇಲೆ ದಾಳಿ ಮಾಡಿ ತೀವ್ರ ಗಾಯಗೊಳಿಸಿದೆ. ಇದರಿಂದ ಒಬ್ಬ ಬಾಲಕ ಗಂಭೀರ ಗಾಯಗೊಂಡಿದ್ದಾನೆ. ಜೊತೆಗೆ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಲಾಗಿದೆ. ಅಲ್ಲದೇ ಪಟ್ಟಣದ ಅನೇಕ ವಾರ್ಡುಗಳಲ್ಲಿ ಬೀದಿನಾಯಿಗಳ ಉಪಟಳ ತೀವ್ರವಾಗಿದ್ದು ಪಾದಚಾರಿ ಮಕ್ಕಳು ಹಾಗೂ ಬೈಕ್ ಸವಾರರ ಮೇಲೆ ಎರಗಿ ಗಾಯಗೊಳಿಸುತ್ತಿವೆ. ಆದ್ದರಿಂದ ಈ ಕೂಡಲೇ ಪ.ಪಂ.ನ ಸಂಬಂಧಪಟ್ಟ ಅಧಿಕಾರಿಗಳು ಇವೆರಡೂ ಸಮಸ್ಯೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ.ಪಂ.ಅಧಿಕಾರಿ ಎಸ್.ಎಂ.ಶಾಸ್ತ್ರೀರವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಪ.ಪಂ.ಅಧಿಕಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಮುಂದಾಗುತ್ತೇವೆಂದರು.
ಈ ಸಂದರ್ಭದಲ್ಲಿ ಪ.ಪಂ.ಆರೋಗ್ಯ ನಿರೀಕ್ಷಕ ಶಶಿಭೂಷಣ ಹಿರೇಮಠ,ಕ.ರ.ವೇ.ತಾಲ್ಲೂಕು ಅಧ್ಯಕ್ಷ ಈ.ರಮೇಶ್ ಬ್ಯಾಲಕುಂದಿ, ಸಿ.ಆರ್.ಗಾಳೇಶ, ಮಾರೇಶ ಯಾದವ್, ಪಾರ್ವತಮ್ಮ, ದೇವಮ್ಮ, ಬಿ.ರಘುರಾಮ ನಾಯಕ್, ಈ.ಅಂಜಿನಿ, ಯರಿಸ್ವಾಮಿಗೌಡ, ಈ.ಸ್ವಾಮಿ, ಆದಿಮನಿ ಮೆಹಬೂಬ್ ಬಾಷ, ಸಚಿನ್, ಜೋಗಿ ರೇವಣ್ಣ, ಸಚಿನ್, ಹುಲುಗಪ್ಪ ಹಾಗೂ ಇತರರು ಇದ್ದರು.