ಬೀದಿ ನಾಯಿಗಳ ನಿಯಂತ್ರಣಕ್ಕೆ ಮನವಿ

ಮರಿಯಮ್ಮನಹಳ್ಳಿ, ಮಾ.27: ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಒಂಟಿಯಾಗಿ ಓಡಾಡುವ ಮಕ್ಕಳ ಮೇಲೆ ಗುಂಪಾಗಿ ದಾಳಿ ಮಾಡುತ್ತಿವೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮಕೈಕೊಳ್ಳುವಂತೆ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಪ.ಪಂ.ಮುಖ್ಯಾಧಿಕಾರಿ ಅಪರ್ಣಿಕರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸರಕಾರಿ ಹೈಸ್ಕೂಲ್ ಹತ್ತಿರದ ಮುಖ್ಯ ಬೀದಿಯಲ್ಲಿ ಚಿಕನ್, ಮಟನ್ ಅಂಗಡಿಗಳಿದ್ದು, ಅವರು ಬಿಸಾಡುವ ಮಾಂಸದ ತ್ಯಾಜ್ಯ ತಿಂದು ರಸ್ತೆ ಹಾಗೂ ಇಕ್ಕೆಲದಲ್ಲಿ ಅಲ್ಲದೇ ಶಾಲಾ ಆವರಣದಲ್ಲಿ ಬೀದಿ ನಾಯಿಗಳು ಗುಂಪಾಗಿ ಬೀಡು ಬಿಡುತ್ತಿವೆ. ಒಂಟಿಯಾಗಿ ಓಡಾಡುವ ಮಕ್ಕಳು ಹಾಗೂ ವೃದ್ದರ ಮೇಲೆ ದಾಳಿ ಮಾಡುತ್ತಿದ್ದು, ಇದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಮನವಿ ಪತ್ರದಲ್ಲಿ ಬೇಡಿಕೆ ಸಲ್ಲಿಸಿದ್ದಾರೆ.
ದಯಮಾಡಿ ಆದಷ್ಟು ಬೇಗನೇ ಬೀದಿನಾಯಿಗಳ ಹಾವಳಿ ನಿಯಂತ್ರಿಸಿ ಶಾಲೆಗೆ ತೆರಳಲು ಅನುವು ಮಾಡಿಕೊಡಬೇಕೆಂದು ಶಾಲಾ ವಿದ್ಯಾರ್ಥಿಗಳಾದ ಆದರ್ಶ, ನಿತಿನ್, ಗೋವರ್ಧನ, ಕೊಟ್ರೇಶ, ಅಭಿರಾಮ್, ಪ್ರವೀಣ, ಶೌರ್ಯ, ಅಭಿಷೇಕ, ದಿವೇನಾ, ಹನಾ, ಶಾಲೋನಿ, ಪ್ರಾರ್ಥನ, ನವ್ಯಲತಾ ಪ.ಪಂ.ನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರನ್ನು ಮನವಿ ಮಾಡಿದ್ದಾರೆ.