ಬೀದಿಬದಿ ಸ್ಥಿರ- ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘ ರಚನೆ

ದಾವಣಗೆರೆ.ಜೂ.೧೦: ಬೀದಿಬದಿ ಸ್ಥಿರ ಹಾಗೂ ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ದಾವಣಗೆರೆ ಬೀದಿಬದಿ ಸ್ಥಿರ ಹಾಗೂ ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘ ರಚಿಸಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಸಮಾವೇಶದ ಮೂಲಕ ಸಂಘದ ರೂಪುರೇಷೆಯನ್ನು ಮಾಡಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಎಸ್. ಇಸ್ಮಾಯಿಲ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ  ಸುಮಾರು ೩೦-೪೦ ವರ್ಷಗಳಿಂದ ಕಡುಬಡವರು, ವೃದ್ಧರು, ಅಂಗವಿಕಲರು, ನಿರುದ್ಯೋಗಿಗಳು ತಮ್ಮ ಜೀವನೋಪಾಯಕ್ಕಾಗಿ ಬೀದಿ ಬದಿ  ಹಾಗೂ ಸಂಚಾರಿ ಚಿಲ್ಲರೆ ವ್ಯಾಪಾರಸ್ಥರು ವ್ಯಾಪಾರ ನಡೆಸುತ್ತಾ ಬಂದಿದ್ದಾರೆ.  ವಿವಿಧ ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದು, ಇದರ ಪರಿಹಾರಕ್ಕಾಗಿ ಕಾರ್ಯನಿರ್ವಹಿಸಲಿದೆ ಎಂದರು.ಅವೈಜ್ಞಾನಿಕ ಜಕಾತಿ ಟೆಂಡರ್ ಪ್ರಕ್ರಿಯೆ ಬಿಟ್ಟು, ಪಾಲಿಕೆಯಿಂದಲೇ ಜಕಾತಿ ಸಂಗ್ರಹಿಸಿ, ರಶೀದಿ ನೀಡಬೇಕು. ಪಾಲಿಕೆ ವ್ಯಾಪ್ತಿಯ ವ್ಯಾಪಾರಸ್ಥರ ಸಮಿತಿ ಸಭೆಯನ್ನು ಮಾಡಬೇಕು.  ಸುಪ್ರೀಂಕೋರ್ಟಿನ ಅಧಿನಿಯಮವನ್ನು  ಪಾಲಿಸಬೇಕು, ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿಗಾಗಿ ಬಜೆಟ್ ನಲ್ಲಿ ಅನುದಾನ ಮೀಸಲಿಡಬೇಕು, ವ್ಯಾಪಾರಸ್ಥರ ಸಂಬಂಧಪಟ್ಟ ವಿಷಯಗಳನ್ನು ತ್ರಿಸದಸ್ಯ ಸಮಿತಿಯು ಕೂಲಂಕುಷವಾಗಿ ಚರ್ಚಿಸಿ, ಪ್ರಜಾತಾಂತ್ರಿಕವಾಗಿ ನಿರ್ಧರಿಸಬೇಕು ಹಾಗೂ ವ್ಯಾಪಾರಸ್ಥರಿಗೆ ಶಾಶ್ವತ ನೆರಳಿನ ವ್ಯವಸ್ಥೆ ಮಾಡಬೇಕು, ಶುದ್ಧ ಕುಡಿಯುವ ನೀರು, ಬೀದಿದೀಪ, ಶೌಚಾಲಯ. ಹಾಗೂ ಚರಂಡಿ ವ್ಯವಸ್ಥೆಗಳನ್ನು ಕಲ್ಪಿಸಬೇಕು, ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸಬಾರದು ಹಾಗೂ ಅರ್ಹ  ವ್ಯಾಪಾರಸ್ಥರಿಗೆ ಕಾಲಕಾಲಕ್ಕೆ ಗುರುತಿನ ಚೀಟಿ ವಿತರಿಸಬೇಕೆಂಬ  ಹಕ್ಕೊತ್ತಾಯ ನಮ್ಮದಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ, ಭಾರತಿ, ಹೆಚ್.ಸಿ. ಮಲ್ಲಪ್ಪ, ದುಗ್ಗಪ್ಪ, ಹೊನ್ನಮ್ಮ, ನಾಗಭೂಷಣ್, ಕೃಷ್ಣಮೂರ್ತಿ, ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.