ಬೀದಿಬದಿ ವ್ಯಾಪಾರಸ್ಥರ ಸಂಘಟನೆಗಳ ಒಕ್ಕೂಟದಿಂದ ಜೆಡಿಎಸ್‌ಗೆ ಬೆಂಬಲ

ಕೋಲಾರ, ಮಾ ೩೧: ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಿದರೆ ಬೀದಿಬದಿ ವ್ಯಾಪಾರಸ್ಥರ ಅನುಕೂಲಕ್ಕೆ ೫೦೦ ತಳ್ಳೋ ಗಾಡಿಗಳು ಹಾಗೂ ನಿಮ್ಮ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಸ್ವಂತ ಕಛೇರಿ ಮಾಡಿಕೊಡಲಾಗುತ್ತದೆ ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ತಿಳಿಸಿದರು.
ನಗರದ ಹೆಚ್.ಪಿ ಪ್ಯಾಲೇಸ್‌ನಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೀದಿಬದಿ ವ್ಯಾಪಾರಸ್ಥರ ಸಂಘಟನೆಗಳ ಒಕ್ಕೂಟದಿಂದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್‌ರಿಗೆ ಬೆಂಬಲ ಸೂಚಿಸಿದರು, ನಂತರ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಳೆ, ಚಳಿ, ಗಾಳಿ ಲೆಕ್ಕಿಸದೇ ಬೀದಿ ಬದಿಯಲ್ಲಿ ಕುಳಿತು ನಿತ್ಯ ವ್ಯಾಪಾರ ಮಾಡುವವರ ಕೊಡುಗೆ ಸಮಾಜಕ್ಕೆ ವಿಶಿಷ್ಟವಾಗಿದೆ ನಿಮ್ಮಗಳ ರಕ್ಷಣೆ ಮಾಡುವುದು ನನ್ನ ಜವಾಬ್ದಾರಿಯಾಗಿದ್ದು, ನನಗೆ ಒಂದು ಅವಕಾಶ ನೀಡಿದರೆ ನಿಮ್ಮ ಸೇವೆ ಮಾಡುತ್ತೇನೆ ಎಂದರು.
ಸರ್ಕಾರಗಳು ಬೀದಿಬದಿ ವ್ಯಾಪಾರಸ್ಥರ ಮೇಲಿನ ಕಾಳಜಿಗಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ, ಆದರೆ ಅವೆಲ್ಲವೂ ಕಾಗದದ ಮೇಲಿದೆ ಕೆಲವು ಅನುಷ್ಠಾನಗೊಂಡರೂ ಅದರಲ್ಲಿ ರಾಜಕೀಯದ ನುಸುಳಿನಿಂದ ನೈಜ ಫಲಾನುಭವಿಗಳು ಕಡೆಗಣನೆಗೆ ಒಳಗಾಗಿದ್ದಾರೆ, ನನಗೆ ಶಾಸಕನಾಗಿ ಅವಕಾಶ ಸಿಕ್ಕರೆ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಕೊರೊನಾ ಸಂದರ್ಭದಲ್ಲಿ ಬೀದಿಬದಿಯ ವ್ಯಾಪಾರಸ್ಥರ ಹಾಗೂ ಅಸಂಘಟಿತ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲು ನಿಮ್ಮ ಬೆಂಬಲವಿರಲಿ ಎಂದರು.