ಬೀದಿನಾಯಿ ಕಡಿದು ಬಾಲಕ ಸಾವು

ಚಿತ್ರದುರ್ಗ, ಜು. 24- ಆಟ ಆಡುತ್ತಿದ್ದಾಗ ಬೀದಿನಾಯಿ ಕಡಿತಕ್ಕೆ ಒಳಗಾಗಿದ್ದ ಬಾಲಕನೊಬ್ಬ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿರುವ ದುರ್ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮೇದೆಹಳ್ಳಿ ಬಿಳಿಕಲ್ಲು ನಾಯಕರಹಟ್ಟಿ ನಿವಾಸಿ ಯಶವಂತ್ (8) ಮೃತಪಟ್ಟವರು.
ನಾಯಿ ಕಡಿತಕ್ಕೆ ಒಳಗಾಗಿದ್ದ ಈ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿನ ವೆನ್​ಲಾಕ್​ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಅಸುನೀಗಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕೋಟೆ ಠಾಣೆ ಪಿಐ ರಮೇಶ್ ತಿಳಿಸಿದ್ದಾರೆ.
ಕೇಶವಮೂರ್ತಿ ಎಂಬವರ ಪುತ್ರ ಯಶವಂತ್ ಮನೆ ಮುಂದೆ ಆಟವಾಡುತ್ತಿದ್ದಾಗ, ಬೀದಿನಾಯಿಯೊಂದು ಐದಾರು ಬಾರಿ ಕಚ್ಚಿದ್ದು, ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು.