ಬೀದಿನಾಯಿಗಳ ಹಾವಳಿಗೆ ಬೇಸತ್ತ ಜನತೆ;  ಸಾರ್ವಜನಿಕರ ಆಕ್ರೋಶ, ಎಂಟು ಜನರಿಗೆ ಕಡಿತ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.19 : ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಬೀದಿನಾಯಿಗಳ ಕಾಟ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಪಟ್ಟಣದ ಸಾರ್ವಜನಿಕರು ಮನವಿ ಸಲ್ಲಿಸಿದರು.
ತೆಕ್ಕಲಕೋಟೆ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಸೋಮವಾರ ಬೀದಿ ನಾಯಿಯೊಂದು 8 ಕ್ಕೂ ಹೆಚ್ಚು ಜನರಿಗೆ ಕಚ್ಚಿದ್ದು ನಾಗರೀಕರು ಆತಂಕಕ್ಕೆ ಒಳಗಾಗಿದ್ದಾರೆ.
ಪಟ್ಟಣದ 3 ನೇ ವಾರ್ಡಿನ ಅಬೂಬಕರ್ ( 9), ಫಲಕ್ ನಾಜ್ (4), 9ನೇ ವಾರ್ಡಿನ ಮುಬೀನ(5), ಹಳೇಕೋಟೆ ಸುಂಕಪ್ಪ(25), ಎಚ್. ಹೊಸಳ್ಳಿ ಗಂಗಮ್ಮ(34) ನಾಯಿ ಕಡಿತಕ್ಕೆ ಒಳಗಾದವರು.
 ಮುಬೀನ(5) ಮಗುವಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಗೆ ತೆರಳುವಂತೆ ವೈದ್ಯರು ಸೂಚಿಸಿದರು.
ಇತ್ತೀಚಿನ ದಿನಗಳಲ್ಲಿ ಬೀದಿನಾಯಿ ಕಡಿತ ಪ್ರಕರಣಗಳು ಹೆಚ್ಚುತ್ತಿದ್ದು, ಇದರಲ್ಲಿ ಬಹುತೇಕ ಮಕ್ಕಳೇ ಹೆಚ್ಚಾಗಿದ್ದಾರೆ.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾರ್ಚ್ ತಿಂಗಳಲ್ಲಿ 50, ಎಪ್ರಿಲ್ 39 ಹಾಗೂ ಮೇ 15 ರವರೆಗೆ 19 ಜನ ಬೀದಿ ನಾಯಿಗಳ ಕಡಿತಕ್ಕ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ  ಬೀದಿ ನಾಯಿಗಳು ಮಕ್ಕಳ ಮೇಲೆ ಏಕಾಏಕಿ ದಾಳಿ ಮಾಡುತ್ತಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.
ಮನೆಯ ಮುಂದೆ ಆಟವಾಡುತ್ತಿದ್ದ 4ವರ್ಷದ ಮೊಮ್ಮಗಳಿಗೆ ಬೀದಿ ನಾಯಿ ಏಕಾಏಕಿ ದಾಳಿ ಮಾಡಿ ಬೆನ್ನಿನ ಹಿಂದೆ ಕಡಿದಿದೆ.
ಪಟ್ಟಣ ಪಂಚಾಯಿತಿಗೆ ಬೀದಿ ನಾಯಿಗಳ ನಿಯಂತ್ರಣಕ್ಕೆ  ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಶೇಕ್ ಸಾಬ್ ಎಂ.
ಪಟ್ಟಣದಲ್ಲಿ ಪಶು ಚಿಕಿತ್ಸಾಲಯ ಇದ್ದು ಇಲ್ಲಿ ಪಶುವೈದ್ಯಾಧಿಕಾರಿ ಇರುವುದಿಲ್ಲ. ಪಟ್ಟಣ ಪಂಚಾಯಿತಿ ಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆ ಖಾಲಿ ಇದೆ. ತಿಂಗಳಿಗೆ 50ಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ವರದಿಯಾಗುತ್ತಿದ್ದರೂ ಪಟ್ಟಣ ಪಂಚಾಯಿತಿ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರು ಆತಂಕಕ್ಕೆ ಕಾರಣವಾಗಿದೆ. ಪಟ್ಟಣ ಪಂಚಾಯಿತಿಗೆ ಬೀದಿ ನಾಯಿಗಳ ಕಾಟಕ್ಕೆ ಸಂಬಂಧಿಸಿದಂತೆ ಎರಡೆರಡು ಬಾರಿ ಮನವಿ ಸಲ್ಲಿಸಿದಾಗ್ಯೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿ ಬಡೇಸಾಬ್.ಕೆ
 ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸುವ ಮೂಲಕ ಇವುಗಳ ಉಪಟಳ ನಿಯಂತ್ರಿಸಲು ಶೀಘ್ರವೇ ಪ್ರಯತ್ನಿಸಲಾಗುವುದು ಹಾಗೂ ಪಟ್ಟಣ ಪಂಚಾಯಿತಿಗೆ ಆರೋಗ್ಯ ನಿರೀಕ್ಷಣಾಧಿಕಾರಿ ನೇಮಿಸಲು ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು.
ಡಿ. ಬಿ. ಈರಣ್ಣ
ಮುಖ್ಯಧಿಕಾರಿಗಳು ಪಟ್ಟಣ ಪಂಚಾಯಿತಿ
ಬಡೇಸಾಬ್, ಕೆ.ಮುಜಾವರ್ ಆಲಂ, ಕಾಡಸಿದ್ದ, ಖಾದರ್ ಭಾಷ, ಆಜ್ಮೀರ್, ಎಚ್.ಜಲಾಲಿ ಇದ್ದರು.