ಬೀದರ ಬ್ರಿಮ್ಸ್ ಆಸ್ಪತ್ರೆಗೆ ಪ್ರತ್ಯೇಕ ಆಕ್ಸಿಜನ್ ಘಟಕ ನಿರ್ಮಿಸಿಕೊಡಿ:ಚವ್ಹಾಣ

ಬೀದರ:ಮೇ.1: ಬೀದರ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್-19 ಸೋಂಕಿತರಿಗೆ ಆಕ್ಸಿಜನ್ ಕೊರತೆಯಾಗದಂತಿರಲು ಪ್ರತ್ಯೇಕ ಆಕ್ಸಿಜನ್ ಘಟಕ ನಿರ್ಮಿಸಿಕೊಡುವಂತೆ ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ ಸುಧಾಕರ ಅವರಲ್ಲಿ ಮನವಿ ಮಾಡಿದ್ದಾರೆ.

ಬೀದರ ಜಿಲ್ಲೆಯಲ್ಲಿ ಕೋವಿಡ್-19 ನಿರ್ವಹಣೆಯ ಪರಿಶೀಲನೆಗಾಗಿ ಬೀದರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಆಂದ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಬೀದರ ಜಿಲ್ಲೆಯಲ್ಲಿ ಕೋವಿಡ್-19 ಹೊಸ ಪ್ರಕರಣಗಳು ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿವೆ. ಅಗತ್ಯವಿರುವ ಎಲ್ಲ ರೋಗಿಗಳಿಗೂ ಆಕ್ಸಿಜನ್ ಒದಗಿಸಿಕೊಡಲು ಖಾಸಗಿ ಸಂಸ್ಥೆಗಳ ಮೇಲೆ ಅವಲಂಬಿತರಾಗದೇ ಸ್ಥಳೀಯವಾಗಿ ಆಕ್ಸಿಜನ್ ಉತ್ಪಾದನೆಯಾಗುವಂತೆ ನೋಡಿಕೊಳ್ಳಬೇಕಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಬೀದರ ಬ್ರಿಮ್ಸ್ ಆಸ್ಪತ್ರೆಯಲ್ಲಿರುವ ವೆಂಟಿಲೇಟರ್‍ಗಳು ಸಾಲುತ್ತಿಲ್ಲ ಹಾಗಾಗಿ ಇನ್ನೂ 50 ವೆಂಟಿಲೇಟರ್ ಯಂತ್ರಗಳನ್ನು ಒದಗಿಸಬೇಕು. ಹುಮನಾಬಾದ ತಾಲೂಕಿಗೆ 30 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಮಂಜೂರು ಮಾಡಬೇಕು. ಬಸವಕಲ್ಯಾಣ ತಾಲೂಕಿನ ಮಂಠಾಳ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವಂತೆ ಕೋರಿದ್ದಾರೆ.

ಹೊಸದಾಗಿ ರಚನೆಯಾದ ಹುಲಸೂರ, ಚಿಟಗುಪ್ಪಾ ಹಾಗೂ ಕಮಲನಗರ ತಾಲೂಕುಗಳಲ್ಲಿ 100 ಹಾಸಿಗೆಗಳ ಆಸ್ಪತ್ರೆಗಳನ್ನು ಮಂಜೂರು ಮಾಡಿಕೊಡಬೇಕು. ಮತ್ತು ಹೊಸ ತಾಲೂಕುಗಳಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ನಿರ್ಮಿಸಿಕೊಡಬೇಕು. ಔರಾದ ತಾಲೂಕಿನಲ್ಲಿ ಅಗತ್ಯವಿರುವ 30 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಹಾಗೂ ಭಾಲ್ಕಿಯಲ್ಲಿ 30 ಹಾಸಿಗೆಗಳ ಎಂ.ಸಿ.ಹೆಚ್ ಸಾರ್ವಜನಿಕ ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸದ್ಯ ಒಂದು ಸಿಟಿ ಸ್ಕ್ಯಾನ್ ಯಂತ್ರವಿದ್ದು, ಎಲ್ಲಾ ರೋಗಿಗಳಿಗೂ ಸಕಾಲಕ್ಕೆ ಸಿಟಿ ಸ್ಕ್ಯಾನ್ ಯಂತ್ರದ ಸೌಲಭ್ಯ ಕಲ್ಪಿಸಲು ವಿಳಂಬವಾಗುತ್ತಿದೆ. ಹಾಗಾಗಿ ಆಸ್ಪತ್ರೆಯಲ್ಲಿ ಮತ್ತೊಂದು ಸಿಟಿ ಸ್ಕ್ಯಾನ್ ಯಂತ್ರ ಅಳವಡಿಸಬೇಕು. ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್-19 ಸೋಂಕಿತರಿಗೆ ಪೌಷ್ಟಿಕಯುಕ್ತ ಆಹಾರ ಸರಬರಾಜು ಮಾಡಲು ಆಸ್ಪತ್ರೆಯ ಆವರಣದಲ್ಲಿಯೇ ಸೆಂಟ್ರಲೈಜ್ಡ್ ಕಿಚನ್ ನಿರ್ಮಿಸಲು ಕ್ರಮ ವಹಿಸಬೇಕೆಂದು ಆರೋಗ್ಯ ಸಚಿವರಲ್ಲಿ ಕೋರಿದ್ದಾರೆ. ಆರೋಗ್ಯ ಸಚಿವರು ಎಲ್ಲಾ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬ್ರಿಮ್ಸ್ ಆಸ್ಪತ್ರೆಯಲ್ಲಿ ಕೂಡಲೇ 25 ವೆಂಟಿಲೇಟರ್‍ಗಳನ್ನು ಖರೀದಿಸಲು ಅನುಮತಿ ನೀಡಿದ್ದು, ಹೊಸ ಸಿಟಿ ಸ್ಕ್ಯಾನ್ ಯಂತ್ರ ಖರೀದಿಸಲು ಮಂಜೂರಾತಿ ನೀಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.