ಬೀದರ ಪಶುವೈದ್ಯ ವಿವಿ ವಿಭಜನೆ ಇಲ್ಲ:ಪ್ರಭು ಚವ್ಹಾಣ

ಕಲಬುರಗಿ ಏ 7: ಬೀದರ ಪಶುವೈದ್ಯಕೀಯ ವಿಶ್ವವಿದ್ಯಾಲಯದ ವಿಭಜನೆಯ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ ಚವ್ಹಾಣ್ ತಿಳಿಸಿದರು. ವಿಧಾನ ಪರಿಷತ್ತು ಸದಸ್ಯ ಬಿ ಜಿ ಪಾಟೀಲ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ವಿವಿಧ ಹಂತದ ಒಟ್ಟು 313 ಪಶು ಚಿಕಿತ್ಸಾ ಸಂಸ್ಥೆಗಳಿವೆ.ಕಲಬುರಗಿಯಲ್ಲಿ 1 ಪಾಲಿ ಕ್ಲಿನಿಕ್, ಕಲಬುರಗಿ ಜಿಲ್ಲೆಯಲ್ಲಿ 29 ಪಶು ಆಸ್ಪತ್ರೆ,109 ಪಶು ಚಿಕಿತ್ಸಾಲಯ,68 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ, ತಾಲೂಕಿಗೆ ಒಂದರಂತೆ 7 ಸಂಚಾರಿ ಪಶು ಚಿಕಿತ್ಸಾಲಯಗಳಿದ್ದು ಒಟ್ಟು 214 ವಿವಿಧ ಹಂತದ ಚಿಕಿತ್ಸಾ ಸಂಸ್ಥೆಗಳಿವೆ.ಯಾದಗಿರಿಯಲ್ಲಿ 1 ಪಾಲಿ ಕ್ಲಿನಿಕ್,ಯಾದಗಿರಿ ಜಿಲ್ಲೆಯಲ್ಲಿ 14 ಪಶು ಆಸ್ಪತ್ರೆ,42 ಪಶು ಚಿಕಿತ್ಸಾಲಯ,39 ಪ್ರಾಥಮಿಕ ಪಶು ಚಿಕಿತ್ಸಾಕೇಂದ್ರ ಮತ್ತು ತಾಲೂಕಿಗೆ ಒಂದರಂತೆ 3 ಸಂಚಾರಿ ಪಶು ಚಿಕಿತ್ಸಾಲಯಗಳಿವೆ.ಒಟ್ಟು 99 ವಿವಿಧ ಹಂತದ ಚಿಕಿತ್ಸಾ ಸಂಸ್ಥೆಗಳಿವೆ.
ಕಲಬುರಗಿ ಜಿಲ್ಲೆಯಲ್ಲಿ 76 ಪಶು ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು,40 ವೈದ್ಯರ ಕೊರತೆ ಇದೆ.215 ನಿರೀಕ್ಷಕರು ಕೆಲಸ ನಿರ್ವಹಿಸುತ್ತಿದ್ದು,ಯಾವುದೇ ಕೊರತೆ ಇಲ್ಲ.ಯಾದಗಿರಿ ಜಿಲ್ಲೆಯಲ್ಲಿ 20 ಪಶು ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು,41 ಪಶು ವೈದ್ಯರ ಕೊರತೆ ಇದೆ.93 ನಿರೀಕ್ಷಕರು ಕೆಲಸ ನಿರ್ವಹಿಸುತ್ತಿದ್ದು11 ಜನರ ಕೊರತೆ ಇದೆ. ಹೊಸದಾಗಿ ರಚನೆಯಾದ ತಾಲೂಕುಗಳಿಗೆ ಇಲಾಖೆಯಿಂದ ಹೊಸ ಹುದ್ದೆಗಳು ಸೃಜನೆಯಾದನಂತರ ಸಂಚಾರಿ ಪಶು ವೈದ್ಯ ಚಿಕಿತ್ಸಾಲಯ ಸೌಲಭ್ಯ ಒದಗಿಸಲಾಗುವದು ಎಂದು ಸಚಿವರು ತಿಳಿಸಿದರು.