
ಬೀದರ್: ಎ.13:ಬಸವ ಜಯಂತಿ ಉತ್ಸವ ಸಮಿತಿಯು ನಗರದಲ್ಲಿ ಈ ಬಾರಿ ಮೂರು ದಿನ ಅರ್ಥಪೂರ್ಣ ಬಸವ ಜಯಂತಿ ಉತ್ಸವ ಆಚರಣೆಗೆ ನಿರ್ಧರಿಸಿದೆ.
ನಗರದ ವಾಲಿ ಕಾಂಪ್ಲೆಕ್ಸ್‍ನಲ್ಲಿ ನಡೆದ ಬಸವ ಜಯಂತಿ ಉತ್ಸವ ಸಮಿತಿ ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅವರು, ಏಪ್ರಿಲ್ 21 ರಿಂದ 23 ರ ವರೆಗೆ ವಿವಿಧ ಕಾರ್ಯಕ್ರಮಗಳ ಆಯೋಜನೆ ಮೂಲಕ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಹೇಳಿದರು.
21 ರಂದು ಬೆಳಿಗ್ಗೆ 9.30ಕ್ಕೆ ಸಿದ್ಧಾರೂಢ ಮಠದಿಂದ ಪಾಪನಾಶ ಮಂದಿರ ವರೆಗೆ 2023 ಬೈಕ್‍ಗಳ ಮಹಾ ರ್ಯಾಲಿ ನಡೆಯಲಿದೆ. ಅಂದು ಸಂಜೆ 6ಕ್ಕೆ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಜಿಲ್ಲೆಯ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಸಮಾಜದ ಗಣ್ಯರ ಉಪಸ್ಥಿತಿಯಲ್ಲಿ ಉತ್ಸವದ ಉದ್ಘಾಟನಾ ಸಮಾರಂಭ ಜರುಗಲಿದೆ ಎಂದು ತಿಳಿಸಿದರು.
ಏ. 22 ರಂದು ಸಂಜೆ 6ಕ್ಕೆ ರಾಜ್ಯಮಟ್ಟದ ಕಲಾವಿದರಿಂದ ವಚನ ಸಂಗೀತೋತ್ಸವ ಜರುಗಲಿದೆ. ಏ. 23 ರಂದು ಸಂಜೆ 5ಕ್ಕೆ ಬಸವೇಶ್ವರ ವೃತ್ತದಿಂದ ನಗರದ ಪ್ರಮುಖ ಬೀದಿಗಳಲ್ಲಿ ಅಲಂಕೃತ ರಥದಲ್ಲಿ ಬಸವೇಶ್ವರ ಭಾವಚಿತ್ರ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಲಿದೆ. ಪ್ರಸಿದ್ಧ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದುಕೊಡಲಿವೆ. ಇದಕ್ಕೂ ಮುನ್ನ ನಗರದ 15 ಕಡೆಗಳಿಂದ ಬಸವೇಶ್ವರ ಭಾವಚಿತ್ರದ ಮೆರವಣಿಗೆಗಳು ಬಸವೇಶ್ವರ ವೃತ್ತಕ್ಕೆ ಬಂದು ಸೇರಲಿವೆ ಎಂದು ಹೇಳಿದರು.
ಬಸವ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಬಸವಾನುಯಾಯಿಗಳು ಬಸವ ಜಯಂತಿ ಉತ್ಸವದ ಯಶಸ್ವಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕಚೇರಿ ಉದ್ಘಾಟಿಸಿದ ಹುಲಸೂರಿನ ಶಿವಾನಂದ ಸ್ವಾಮೀಜಿ ಮಾತನಾಡಿ, ಸಮಾಜಕ್ಕೆ ಉತ್ತಮ ಸಂದೇಶ ರವಾನೆ ಆಗುವ ರೀತಿಯಲ್ಲಿ ಬಸವ ಜಯಂತಿ ಉತ್ಸವ ಆಚರಿಸಬೇಕು. ಬಸವ ಪರ ಸಂಘಟನೆಗಳ ಪದಾಧಿಕಾರಿಗಳು ಒಗ್ಗೂಡಿ, ವ್ಯವಸ್ಥಿತ ಉತ್ಸವ ಸಂಘಟಿಸಬೇಕು ಎಂದು ಹೇಳಿದರು.
ಹಿರಿಯ ಮುಖಂಡ ಶಿವಶರಣಪ್ಪ ವಾಲಿ ಮಾತನಾಡಿ, ಬಸವ ಜಯಂತಿ ಉತ್ಸವ ಸಮಿತಿಗೆ ಉತ್ಸವದ ಯಶಸ್ವಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಮಾತನಾಡಿ, ಬಸವ ಜಯಂತಿ ಉತ್ಸವದ ಕಾರ್ಯಕ್ರಮಗಳಲ್ಲಿ ಬಸವಾನುಯಾಯಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಬಸವ ಜಯಂತಿ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ ಚನಶೆಟ್ಟಿ ಮಾತನಾಡಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅರ್ಥಪೂರ್ಣ ಬಸವ ಜಯಂತಿ ಉತ್ಸವ ಆಚರಿಸಲು ಸರ್ವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಮುಖಂಡರಾದ ಚಂದ್ರಶೇಖರ ಪಾಟೀಲ ಗಾದಗಿ, ಕುಶಾಲರಾವ್ ಪಾಟೀಲ ಖಾಜಾಪುರ, ಸೋಮಶೇಖರ ಪಾಟೀಲ ಗಾದಗಿ, ಶರಣಪ್ಪ ಮಿಠಾರೆ, ಬಸವರಾಜ ಭತಮುರ್ಗೆ, ಸುರೇಶ ಸ್ವಾಮಿ, ಹಾವಶೆಟ್ಟಿ ಪಾಟೀಲ, ರಾಜೇಂದ್ರ ಜೊನ್ನಿಕೇರಿ, ಸಿದ್ದಯ್ಯ ಸ್ವಾಮಿ, ದೀಪಕ್ ವಾಲಿ, ಶಕುಂತಲಾ ಬೆಲ್ದಾಳೆ, ನಂದಕುಮಾರ ಪಾಟೀಲ, ವೈಜಿನಾಥ ಸಜ್ಜನಶೆಟ್ಟಿ, ಶಾಲಿವಾನ್ ಗಂದಗೆ, ಮಲ್ಲಿಕಾರ್ಜುನ ಪಂಚಾಕ್ಷರಿ, ಶಿವಶರಣಪ್ಪ ಪಾಟೀಲ, ಅರುಣ ಹೋತಪೇಟ್, ಅಶೋಕ ದಿಡಗೆ, ಸಂತೋಷ ಚಲುವಾ ಮೊದಲಾದವರು ಇದ್ದರು.