ಬೀದರ: ನಕಲು ಮಾಡುತ್ತಿದ್ದ 4 ವಿದ್ಯಾರ್ಥಿಗಳು ಡಿಬಾರ್

ಕಲಬುರಗಿ ಅ 30: ಗುಲಬರ್ಗ ವಿಶ್ವವಿದ್ಯಾಲಯದ ಸ್ನಾತಕ ಕೋರ್ಸಿನ ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಬೀದರ ಜಿಲ್ಲೆಯ ವಿವಿಧ ಕಾಲೇಜುಗಳ ನಾಲ್ವರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ.
ಗುವಿವಿ ಕುಲಪತಿ ಪ್ರೊ ದಯಾನಂದ ಅಗಸರ ಅವರು ಬೀದರ ಜಿಲ್ಲೆಯ ವಿವಿಧ ಕಾಲೇಜುಗಳ ಪರೀಕ್ಷಾ ಕೇಂದ್ರಗಳಿಗೆ ಶುಕ್ರವಾರ ಅನಿರೀಕ್ಷಿತ ಭೇಟಿ ನೀಡಿದರು. ಅವರ ಭೇಟಿಯ ಸಂದರ್ಭದಲ್ಲಿ ನಕಲು ಮಾಡುತ್ತಿದ್ದ, ಬೀದರ ನಗರದ ಸನ್‍ಸಾಫ್ಟ್ ಪದವಿ ಮಹಾವಿದ್ಯಾಲಯ, ಮತ್ತು ವಿ ಕೆ ಇಂಟರ್ ನ್ಯಾಶನಲ್ ಪದವಿ ಕಾಲೇಜು, ಔರಾದ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಭಾಲ್ಕಿಯ ಸಿಎಸ್‍ಎಂ ಪದವಿ ಕಾಲೇಜಿನ ತಲಾ ಒಬ್ಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಿದ್ದಾರೆ. ಆಂತರಿಕ ಹಿರಿಯ ಮೇಲ್ವಿಚಾರಕರಿಗೆ ನೊಟೀಸ್ ನೀಡುವಂತೆ ಸೂಚಿಸಿದ್ದಾರೆ.ಕುಲಪತಿಗಳು ಭಾಲ್ಕಿ ಪಟ್ಟಣದ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಪರೀಕ್ಷಾ ಪ್ರಕ್ರಿಯೆ ಪರಿಶೀಲಿಸಿದರು ಎಂದು ಕುಲಸಚಿವರು ( ಮೌಲ್ಯಮಾಪನ ) ತಿಳಿಸಿದ್ದಾರೆ.