ಬೀದರ ದಕ್ಷಿಣ ಕ್ಷೇತ್ರದಲ್ಲಿ ಡಾ. ರಾಜಕುಮಾರ ಹೆಬ್ಬಾಳೆ ಪರ ಮತಯಾಚನೆ

ಬೀದರ:ಎ.25: ಮೇ 9 ರಂದು ನಡೆಯುವ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ನಿಮಿತ್ಯ ಜಿಲ್ಲಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ಡಾ. ರಾಜಕುಮಾರ ಹೆಬ್ಬಾಳೆಯವರು ಬೀದರ ದಕ್ಷಿಣ ಕ್ಷೇತ್ರದ ಭೋಸಗಾ, ಮನ್ನಳ್ಳಿ ಹಾಗೂ ವಿವಿಧ ಗ್ರಾಮಗಳಲ್ಲಿ ತಮ್ಮ ಮತಯಾಚನೆ ಮಾಡಿದರು.

ಬೀದರ ದಕ್ಷಿಣ ವಿಭಾಗದ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ರಾಜಕುಮಾರ ಮಡಕಿ ಮಾತನಾಡಿ “ಡಾ. ರಾಜಕುಮಾರ ಹೆಬ್ಬಾಳೆಯವರು ತಮ್ಮ ಹಿಂದೆ ಕಾರ್ಯಕರ್ತರ ದಂಡು ಇದ್ದರೂ ಕೂಡಾ ಕೋವಿಡ್ ನಿಯಮಗಳನ್ನು ಪಾಲಿಸುತ್ತಾ ಕೇವಲ ಮೂರರಿಂದ ನಾಲ್ಕು ಜನರನ್ನು ಮಾತ್ರೆ ಜೊತೆಗೆ ಕರೆದುಕೊಂಡು ಬೀದರ ದಕ್ಷಿಣ ವಿಭಾಗದಲ್ಲಿ ಮನೆಮನೆಗಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಈ ಬಾರಿ ಮತದಾರರ ಪ್ರತಿಕ್ರಿಯೆ ಹೆಬ್ಬಾಳೆಯವರ ಕಡೆಗಿದೆ. ಈಗಾಗಲೇ ಹಲವಾರು ವ್ಯಕ್ತಿಗಳಿಗೆ ಅವಕಾಶ ನೀಡಲಾಗಿದೆ. ಇದು ಸಾಹಿತ್ಯ ಕ್ಷೇತ್ರ ಇರುವುದರಿಂದ ಇದರಲ್ಲಿ ರಾಜಕೀಯ ಬೆರೆಯುತ್ತಿರುವುದು ಸಾಹಿತಿಗಳಿಗೆ ಆತಂಕಕ್ಕೀಡು ಮಾಡಿದೆ. ಹಾಗಾಗಲು ಮತದಾರರು ಯಾವುದೇ ಕಾರಣಕ್ಕೂ ಬಿಡಬಾರದು. ರಾಜಕೀಯರಹಿತ, ದ್ವೇಷರಹಿತವಾಗಿ ಸಾಹಿತ್ಯ ಮತ್ತು ಜನಪದ ಕ್ಷೇತ್ರದ ಏಳ್ಗೆಗಾಗಿ ಹಗಲಿರುಳು ದುಡಿಯುತ್ತಿರುವ ಡಾ. ರಾಜಕುಮಾರ ಹೆಬ್ಬಾಳೆಯವರಿಗೆ ಒಂದು ಅವಕಾಶ ನೀಡಬೇಕು. ಅಲ್ಲದೆ ಡಾ. ರಾಜಕುಮಾರ ಹೆಬ್ಬಾಳೆಯವರು ಕಳೆದ ಅವಧಿಯಲ್ಲಿಯೇ ಗೆಲುವು ಸಾಧಿಸುತ್ತಿದ್ದರು. ಆದರೆ ಈ ಹಿಂದಿನ ಅಧ್ಯಕ್ಷರು ತನಗೆ ಸಹಕಾರ ನೀಡುವಂತೆ ಬೇಡಿಕೊಂಡ ಕಾರಣ ಹೆಬ್ಬಾಳೆಯವರು ತಮ್ಮ ಅಧಿಕಾರ ತ್ಯಾಗ ಮಾಡಿ ಹಿಂದೆ ಸರಿದರು. ಆದ್ದರಿಂದ ಈ ಬಾರಿ ಹೊಸಮುಖ ಡಾ. ರಾಜಕುಮಾರ ಅವರಿಗೆ ಆರಿಸಿ ತಂದು ಕನ್ನಡಮಾತೆಯ ಸೇವೆ ಮಾಡಲು ಅವಕಾಶ ನೀಡಬೇಕೆಂದು ಮತದಾರರಿಗೆ ವಿನಂತಿ ಮಾಡಿಕೊಂಡರು.

ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿಗಳಾದ ಡಾ. ರಾಜಕುಮಾರ ಹೆಬ್ಬಾಳೆಯವರು ಮಾತನಾಡಿ “ಇಲ್ಲಿಯವರೆಗೆ ಸ್ವತಃ ಮನೆ ಹಣ ಖರ್ಚು ಮಾಡಿ, ಎಲ್ಲಾ ಕಡೆ ಓಡಾಡಿ ಸಾವಿರಾರು ಕಲಾವಿದರ ಬಾಳಿನಲ್ಲಿ ಜ್ಯೋತಿ ಬೆಳಗಿಸುವ ಕಾರ್ಯ ಮಾಡಿರುವೆ. ಮುಂದೆಯೂ ಬೀದರನಲ್ಲಿ ಅಂತರಾಷ್ಟ್ರೀಯ ಜನಪದ ಸಮ್ಮೇಳನ ಆಯೋಜಿಸಿ ತನ್ಮೂಲಕ ಸಾಹಿತಿಗಳಿಗೆ ಹಾಗೂ ಕಲಾವಿದರಿಗೆ ವೇದಿಕೆ ಒದಗಿಸುವ ಬಹುದೊಡ್ಡ ಕನಸಿದೆ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮತದಾರರು ದಯವಿಟ್ಟು ಒಂದೇ ಒಂದು ಅವಕಾಶ ನೀಡಬೇಕೆಂದು ಮತದಾರರಲ್ಲಿ ವಿನಂತಿ ಮಾಡಿಕೊಂಡರು. ಅಲ್ಲದೆ ಕೋವಿಡ್ ಸಂದರ್ಭದಲ್ಲಿ ಕೊರೊನಾ ವೈರಸ್ ಹೊಂದಿರುವ ರೋಗಿಗಳ ಸೇವೆ ಮಾಡುವ ಅವಕಾಶ ಒದಗಿ ಬಂದಿತ್ತು. ಸುಮಾರು 4 ಸಾವಿರಕ್ಕೂ ಹೆಚ್ಚು ಜನರ ಗಂಟಲು ದ್ರವ ಮಾದರಿ ಪರೀಕ್ಷಿಸಿ ಸ್ವತಃ ನನಗೆ ಕೋವಿಡ್ ಬಂದಿತ್ತು. ಹೈದರಾಬಾದ ಆಸ್ಪತ್ರೆಯಲ್ಲಿ ಒಂದು ತಿಂಗಳುಗಳ ಕಾಲ ಚಿಕಿತ್ಸೆ ಪಡೆದು ಸಾಹಿತಿಗಳ ಮತ್ತು ಕಲಾವಿದರ ಆಶೀರ್ವಾದದಿಂದ ಬದುಕಿ ಬಂದಿರುವೆ. ಮತ್ತೆ ತಮ್ಮೆಲ್ಲರ ಸೇವೆ ಮಾಡುವ ಸೌಭಾಗ್ಯ ಒದಗಿ ಬಂದಿದೆ. ಆದ್ದರಿಂದ ಹೊಸದಾಗಿ ಸ್ಪರ್ಧಿಸುತ್ತಿರುವ ನನಗೆ ತಮ್ಮೆಲ್ಲರ ಆಶೀರ್ವಾದ ಬೇಕು ಎಂದು ತಿಳಿಸಿದರು. ಇದೇ ವೇಳೆ ಚನ್ನಬಸವ ಕಮಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.