ಬೀದರ ತಾಲೂಕು 8ನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪಂಡಿತ ಬಸವರಾಜ ಆಯ್ಕೆ

ಬೀದರ್: ಜ.19 : ಬೀದರ ತಾಲೂಕು 8ನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಪಂಡಿತ ಬಸವರಾಜ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪೆÇ್ರ.ಜಗನ್ನಾಥ ಕಮಲಾಪುರೆ ತಿಳಿಸಿದ್ದಾರೆ.
ಬೀದರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಎಸ್.ಮನೋಹರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ತಾಲೂಕು ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಹಿರಿಯ ಸಾಹಿತಿಗಳಾದ ಪಂಡಿತ ಬಸವರಾಜ ಅವರನ್ನು ಆಯ್ಕೆ ಮಾಡಲಾಯಿತೆಂದು ತಿಳಿಸಿದ್ದಾರೆ. ಪಂಡಿತ ಬಸವರಾಜ ಅವರು ಬೀದರ ತಾಲೂಕು ಎಂಟನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತಾಲೂಕು ಅಧ್ಯಕ್ಷರಾದ ಎಂ.ಎಸ್.ಮನೋಹರ, ಜಿಲ್ಲಾ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ, ಜಿಲ್ಲಾ ಕೋಶಾಧ್ಯಕ್ಷರಾದ ಶಿವಶಂಕರ ಟೋಕರೆ, ಜಿಲ್ಲಾ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ ನೇತೃತ್ವದಲ್ಲಿ ತಾಲೂಕು ಕೋಶಾಧ್ಯಕ್ಷ ಅಶೋಕ ದಿಡಗೆ, ಉಪಾಧ್ಯಕ್ಷ ಸಿದ್ಧಾರೂಢ ಭಾಲ್ಕೆ ಅವರು ಪಂಡಿತ ಬಸವರಾಜ ಅವರ ಮನೆಗೆ ಹೋಗಿ ಅವರನ್ನು ಗೌರವಿಸಿ ಅಭಿನಂದಿಸಿದರು.
ಸಭೆಯಲ್ಲಿ ತಾಲೂಕು ಗೌರವ ಕಾರ್ಯದರ್ಶಿ ಶಿವಕುಮಾರ ಚೆನ್ನಶೆಟ್ಟಿ, ಗೌರವ ಕೋಶಾಧ್ಯಕ್ಷ ಅಶೋಕ ದಿಡಗೆ, ತಾಲೂಕು ಉಪಾಧ್ಯಕ್ಷ ಸಿದ್ಧಾರೂಢ ಭಾಲ್ಕೆ, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಪಾಟೀಲ, ವಿದ್ಯಾವತಿ ಬಲ್ಲೂರು, ಕಾರ್ಯಕಾರಿ ಮಂಡಳಿ ಸದಸ್ಯರಾದ ಚಂದ್ರಕಾಂತ ಪಾಟೀಲ ಚಿಮಕೋಡ್, ಗಣಪತಿ ಭಕ್ತಾ, ಶ್ರೀದೇವಿ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ಪಂಡಿತ ಬಸವರಾಜ ಪರಿಚಯ : ಬೀದರ ನಗರ ವಾಸಿಯಾಗಿರುವ ಪಂಡಿತ ಬಸವರಾಜ ಅವರು ಮೂಲತಃ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕಿಟ್ಟಾ ಗ್ರಾಮದವರಾಗಿದ್ದು, 1962ರಿಂದ 2002ರವರೆಗೆ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ, ಸಹಾಯಕ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. 1981ರಲ್ಲಿ ಅವರಿಗೆ ‘ಪಂಡಿತ’ ಎನ್ನುವ ಪದವಿ ಪಡೆದಿರುತ್ತಾರೆ. ವ್ಯಾಕರಣ, ಛಂದಸ್ಸು ಮತ್ತು ಭಾಷಾಶಾಸ್ತ್ರ ಪ್ರವೀಣರಾಗಿರುವ ಅವರ ಕಾವ್ಯಕೃಷಿಯು ಛಂದೋಬದ್ಧವಾಗಿದ್ದು, ಪಾರಂಪರಿಕ ಶಾಸ್ತ್ರ ವಿಷಯಗಳಲ್ಲಿ ಪಾರಂಗತರಾಗಿದ್ದಾರೆ. ಇದೀಗ 80 ವರ್ಷದವರಾಗಿರುವ ಪಂಡಿತ ಬಸವರಾಜ ಅವರು ‘ಹೃನ್ನಾದ’ (ಕವನ ಸಂಕಲನ), ಕಮ್ಮಟದ ಕಾರಣಿಕ (ಚನ್ನಬಸವ ಪಟ್ಟದ್ದೇವರ ಜೀವನ ಚರಿತ್ರೆ) ಭಾಮಿನಿ ಷಟ್ಪದಿಯಲ್ಲಿ ರಚಿಸಿರುತ್ತಾರೆ. ವಿವೇಚನೆ (ಲೇಖನಗಳ ಸಂಗ್ರಹ), ಸ್ವಾತಂತ್ರ?? ಹೋರಾಟಗಾರ ಲಿಂಗಶೆಟ್ಟೆಪ್ಪ ಸಾಹು (ಜೀವನ ಚರಿತ್ರೆ), ವಚನ ಚಿಂತನ (ಉರಿಲಿಂಗಪೆದ್ದಿ ಮತ್ತು ಕಾಳವ್ವೆಯ ವಚನಗಳ ಸರಳಾನುವಾದ), ಸಂಸ್ಕøತಿ ಚಿಂತನ (ಆಯ್ದ ಲೇಖನಗಳು) ಮುಂತಾದ ಕೃತಿಗಳನ್ನು ರಚಿಸಿದ್ದಾರಲ್ಲದೇ ಹೇಮರೆಡ್ಡಿ ಮಲ್ಲಮಾಂಬೆಯ ಪುರಾಣಗಳನ್ನು ಅನುವಾದಿಸಿದ್ದಾರೆ. ಇದೀಗ ಅವರ ಸಾಹಿತ್ಯಾವಲೋಕನ ಕುರಿತು ಎಂ.ಜಿ.ದೇಶಪಾಂಡೆ ಮತ್ತು ಡಾ.ರಘುಶಂಖ ಭಾತಂಬ್ರಾ ಅವರು ‘ಹೊಳೆ’ ಎನ್ನುವ ಕೃತಿಯನ್ನು ಪ್ರಕಟಿಸಿದ್ದು, ಅದಿನ್ನು ಬಿಡುಗಡೆಯಾಗಬೇಕಾಗಿದೆ. ಅವರ ಅನೇಕ ಲೇಖನಗಳು, ಬರಹಗಳು ಆಕಾಶವಾಣಿ ಮತ್ತು ರಾಜ್ಯ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವರು ವ್ಯಾಕರಣಬದ್ಧವಾಗಿ ಸಾನೆಟ್‍ಗಳನ್ನು ಬರೆದಿದ್ದಾರೆ.
56ನೇ ಮತ್ತು 62ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಈ ಹಿಂದೆ ನಾರಾಯಣಪುರ ಗ್ರಾಮದಲ್ಲಿ ಜರುಗಿದ ವಲಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿತ್ತು.