ಬೀದರ, ಜೂ.18: ಬೀದರ ಜಿಲ್ಲೆಯ ರೈತರು ತಮ್ಮ ಸಮೀಪದ ಅರಣ್ಯ ಇಲಾಖೆಯಿಂದ ಸಸಿಗಳನ್ನು ಪಡೆದು ತಮ್ಮ-ತಮ್ಮ ಹೊಲಗಳಲ್ಲಿ ನೆಡುವ ಮೂಲಕ ಬೀದರ ಜಿಲ್ಲೆಯನ್ನು ಹಸಿರು ಜಿಲ್ಲೆಯನ್ನಾಗಿಸಲು ಎಲ್ಲರೂ ಕೈಜೋಡಿಸಬೇಕೆಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರೀಜೆಶ್ ಕುಮಾರ ದೀಕ್ಷಿತ್ ಹೇಳಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ವನಮಹೋತ್ಸವದ ಅಂಗವಾಗಿ ಕರೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ, ಶಾಲಾ ಕಾಲೇಜುಗಳು, ಅಂಗನವಾಡಿ ಕೇಂದ್ರಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಡಬೇಕು. ವನಮಹೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ ಐದು ಲಕ್ಷ ಸಸಿಗಳನ್ನು ನೆಡಲಾಗುವುದು. ಇವುಗಳನ್ನು ಸಂರಕ್ಷಣೆ ಮಾಡಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸರಾಸರಿ ಅರಣ್ಯ ಪ್ರದೇಶ ಶೇ.33 ರಷ್ಟಿರಬೇಕು, ಆದರೆ ರಾಜ್ಯದಲ್ಲಿ ಶೇ.20 ಪ್ರತಿಶತ ಅರಣ್ಯ ಪ್ರದೇಶವಿದ್ದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ.3.4 ರಷ್ಟಿದೆ ಹಾಗಾಗಿ ಈ ಭಾಗದಲ್ಲಿ ಹೆಚ್ಚಿನ ಗಿಡ-ಮರಗಳನ್ನು ನೆಡಬೇಕೆಂದು ಹೇಳಿದರು.
ಅರಣ್ಯ ಇಲಾಖೆಯಲ್ಲಿ ಶ್ರೀಗಂಧ, ಮಹಾಗನಿ, ಸಿಲ್ವರ್ ಓಕ್, ಸೇರಿದಂತೆ ಹಲವಾರು ಸಸಿಗಳಿದ್ದು ಇವುಗಳನ್ನು ಪಡೆದು ಸಾರ್ವಜನಿಕರು ತಮ್ಮ ಹೊಲ-ಗದ್ದೆ, ಕಛೇರಿ, ಮನೆಯ ಕೈತೋಟ, ಶಾಲಾ-ಕಾಲೇಜುಗಳ ಆವರಣ, ವಸತಿ ನಿಲಯಗಳ ಆವರಣ, ಸಾರ್ವಜನಿಕ ಉದ್ಯಾನವನ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಸಸಿಗಳನ್ನು ನೆಡಬೇಕೆಂದರು.
ಸಸಿಗಳನ್ನು ನೆಡುವುದು ಎಷ್ಟು ಮುಖ್ಯವಾಗಿದೆಯೋ, ಅವುಗಳನ್ನು ಪೋಷಿಸಿ ಸಂರಕ್ಷಣೆ ಮಾಡಿ ಬೆಳೆಸುವುದು ಅಷ್ಟೆ ಮುಖ್ಯವಾಗಿದೆ. ಈ ವರ್ಷ ನೆಟ್ಟ ಸಸಿಗಳನ್ನು ಮುಂದಿನ ವರ್ಷ ಎಷ್ಟು ಉಳಿದಿವೆ ಎನ್ನುವ ಕುರಿತು ಮಾಹಿತಿ ಸಂಗ್ರಹಿಸಲಾಗುವುದು ಮತ್ತು ಹೆಚ್ಚು ಸಸಿಗಳನ್ನು ನೆಟ್ಟ ಮಾದರಿ ಶಾಲಾ-ಕಾಲೇಜುಗಳು, ಗ್ರಾಮ ಪಂಚಾಯತಿ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ಶಾಲಾ ಕಾಲೇಜಿಗಳಲ್ಲಿ ಸಸಿಗಳನ್ನು ನೆಟ್ಟ ನಂತರ ಒಂದೊಂದು ವಿದ್ಯಾರ್ಥಿಗೆ ಒಂದು ಗಿಡವನ್ನು ದತ್ತು ಕೊಡಬೇಕು ಅಂದಾಗ ಅವರು ಅದನ್ನು ಕಾಳಜಿಯಿಂದ ಬೆಳೆಸುವದರ ಜೊತೆಗೆ ಕಾಲೇಜು ಬಿಟ್ಟು ಹೊದ ನಂತರವು ಮತ್ತೆ ಅಲ್ಲಿಗೆ ಬಂದಾಗ ಇದು ನಾನು ಬೆಳೆಸಿದ ಮರ ಎಂಬ ನೆನಪು ಅವರಿಗೆ ಇರುತ್ತದೆ ಎಂದ ಅವರು ಸಾರ್ವಜನಿಕರು ಈ ವನಮಹೋತ್ಸವ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕೆಂದು ಹೇಳಿದರು.
ಈ ಸಭೆಯಲ್ಲಿ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಲಬುರಗಿ ವೃತ್ತದ ನೋಡಲ್ ಅಧಿಕಾರಿ ವಿಶ್ವಜೀತ್ ಮಿಶ್ರಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬೀದರ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಮಾಜಿಕ ವಿಭಾಗದ ಎ.ಬಿ.ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಪ್ರಭಾಕರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರತಿಕಾಂತ ಸ್ವಾಮಿ, ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.