ಬೀದರ ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳ ಕುರಿತು ಮನವಿ.

ಬೀದರ,ಜೂ.1- ಜಿಲ್ಲೆಯಲ್ಲಿ ರೈತ ಒಂದಲ್ಲೊಂದು ಸಮಸ್ಯೆಗಳಿಗೆ ಸಿಲುಕಿರುತ್ತಾನೆ. ಅತಿವೃಷ್ಟಿ ಇರಬಹುದು, ಅನಾವೃಷ್ಠಿ ಇರಬಹುದು, ಅಕಾಲಿಕ ಮಳೆ ಇರಬಹುದು, ಬೆಲೆ ಕುಸಿತ ಇರಬಹುದು, ಇಂತಹ ಹಲವಾರು ಸಮಸ್ಯೆಗಳಿಗೆ ತುತ್ತಾಗಿರುತ್ತಾನೆ. ಇವುಗಳ ಬಗ್ಗೆ ಹಿಂದಿನ ಸರ್ಕಾರಕ್ಕೆ ಹಲವಾರು ಸಲ ಮನವಿಕೊಟ್ಟು ಭೇಟಿಯಾಗಿ ಮಾತನಾಡಿದರೂ ಕೂಡ ಯಾವುದೇ ಸಮಸ್ಯೆಗಳು ಬಗೆಹರಿದಿಲ್ಲ.
ಸಮಸ್ಯೆಗಳು: ಕೇಂದ್ರ ಸರ್ಕಾರ ಜಾರಿ ಮಾಡಿರುವ ರೈತ ವಿರೋಧಿ 3 ಕೃಷಿ ಕಾಯ್ದೆಯನ್ನು ಹಿಂದಿನ ಸರ್ಕಾರ ಕೂಡ ರಾಜ್ಯದಲ್ಲಿ ಜಾರಿ ಮಾಡಿದೆ.
ಆದರೂ ಹಿಂಪಡೆದಿರುವುದಿಲ್ಲ. ಆದಕಾರಣ ತಾವುಗಳು ಸದರಿ ಕಾಯ್ದೆಗಳನ್ನು ಹಿಂಪಡೆಯಬೇಕು. ತೊಗರಿ ಬೆಳೆ ನೆಟೆರೋಗದಿಂದ ಹಾಳಾಗಿದ್ದು, ಅದಕ್ಕೆ ಹಿಂದಿನ ಸರ್ಕಾರ ಪರಿಹಾರ ಘೋಷಣೆ ಮಾಡಿತ್ತು. ಆದರೆ ಇಲ್ಲಿಯವರೆಗೆ ರೈತರಿಗೆ ಪರಿಹಾರ ಸಿಕ್ಕಿಲ್ಲ. ಆದಕಾರಣ ತಾವುಗಳು ಪರಿಹಾರ ಬಿಡುಗಡೆ ಮಾಡಬೇಕು. ಅಕಾಲಿಕ ಮಳೆಯಿಂದ ಕಡಲೆ, ಜೋಳ, ತೊಗರಿ, ಕುಸುಬೆ, ತೋಟಗಾರಿಕೆ ಬೆಳೆ, ತರಕಾರಿ ಬೆಳೆ ಹಾಗೂ ಇನ್ನೀತರ ಬೆಳೆಗಳು ನಷ್ಟವಾಗಿದ್ದು, ಅದಕ್ಕೆ ಪರಿಹಾರ ಕೊಡಬೇಕು. ಖರೀಫ್ ಹಂಗಾಮು ಮತ್ತು ರಬ್ಬಿ ಹಂಗಾಮಿನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ರೈತರ ಬೆಳೆ ವಿಮೆ ಕಂತು ಕಟ್ಟಿದರೂ ಮತ್ತು ಬೆಳೆಗಳು ಕೂಡ ಪ್ರಕೃತಿ ವಿಕೋಪದಿಂದ ನಷ್ಟವಾದರೂ ಇಲ್ಲಿಯವರೆಗೆ ರೈತರಿಗೆ ಪರಿಹಾರ ಸಿಕ್ಕಿಲ್ಲ. ಅದನ್ನು ತಾವುಗಳು ಒದಗಿಸಬೇಕು. ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿರುವ ರೈತರ ಖಾತೆಗೆ 5-6 ತಿಂಗಳಾದರೂ ಕೆಲವು ಕಾರ್ಖಾನೆಗಳು ಇಲ್ಲಿಯವರೆಗೆ ಹಣ ಸಂದಾಯ ಮಾಡಿರುವುದಿಲ್ಲ. ಅಂತಹವರ ಮೇಲೆ ಕಠಿಣ ಕ್ರಮ ಕೈಗೊಂಡು, ರೈತರಿಗೆ ನ್ಯಾಯ ಒದಗಿಸಿಕೊಡಬೇಕು. ಪ್ರಸಕ್ತ ಸಾಲಿನಲ್ಲಿ ರೈತರಿಗೆ ಗುಣಮಟ್ಟದ ಮತ್ತು ಸಮರ್ಪಕ ಬೀಜ ಹಾಗೂ ರಸಗೊಬ್ಬರಗಳನ್ನು ಪೂರೈಕೆ ಮಾಡಬೇಕು. ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿಯಲ್ಲಿ ರೈತರ ಹೊಲಗಳಿಗೆ ದಾರಿ ಮಾಡಿಸಿಕೊಡಬೇಕು. ರಾತ್ರಿ ಹೊತ್ತಿನಲ್ಲಿ ರೈತರ ತೋಟಗಳಿಗೆ ವಿದ್ಯುತ್ ಒದಗಿಸಬೇಕು. ರೈತರ ಹೊಲಗಳಲ್ಲಿನ ಬೆಳೆಗಳಿಗೆ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಅದನ್ನು ತಡೆಗಟ್ಟಲು ಪರ್ಯಾಯ ವ್ಯವಸ್ಥೆ ಹುಡುಕಿ, ರೈತರ ಹಿತ ಕಾಪಾಡಬೇಕು. ಕಾರಂಜಾ ಸಂತ್ರಸ್ತರು ಸುಮಾರು 8 ತಿಂಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಅವರಿಗೆ ವೈಜ್ಞಾನಿಕವಾಗಿ ಪರಿಹಾರ ಒದಗಿಸಿಕೊಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೀದರ ಜಿಲ್ಲಾ ಘಟಕದ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸಿದ್ರಾಮಪ್ಪಾ ಆಣದೂರೆ, ಶ್ರೀಮಂತ ಬಿರಾದಾರ, ದಯಾನಂದ ಸ್ವಾಮಿ, ನಾಗಯ್ಯಾ ಸ್ವಾಮಿ, ಪ್ರಕಾಶ ಬಾವಗೆ, ಬಬುರಾವ ಜೋಳದಾಬಕೆ ಸೇರಿದಂತೆ ಅನೇಕ ರೈತರು ಇದ್ದರು.