ಬೀದರ ಜಿಲ್ಲೆಯಾದ್ಯಂತ ಮೇ 12ರ ವರೆಗೆ ನಿಷೇಧಾಜ್ಞೆ ಜಾರಿ

ಬೀದರ:ಎ.29: ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ಹಾಗೂ ಕಾನೂನ ಸುವ್ಯವಸ್ಥೆ ಹಿತದೃಷ್ಟಿಯಿಂದ ಏಪ್ರೀಲ್ 27ರಿಂದಲೇ ಅನ್ವಯವಾಗುವಂತೆ ಮೇ 12ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಸಿ ಮತ್ತು ರಾಜ್ಯ ಸರ್ಕಾರದಿಂದ ಹೊರಡಿಸಿರುವ ಆದೇಶದಂತೆ ಕೋವಿಡ್-19ರ ಮಾರ್ಗಸೂಚಿಗಳನ್ನು ಹೊರಡಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಆದೇಶ ಹೊರಡಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು ಈಗಾಗಲೇ ಸಾಂಕ್ರಾಮಿಕ ರೋಗವೆಂದು ಘೋಷಿಸಿರುವ ಕೋವಿಡ್-19 ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕದ ಹರಡುವಿಕೆಯ ಆತಂಕವು ಪ್ರಾರಂಭವಾಗಿದ್ದು, ಕೋವಿಡ್-19 ಪರಿಸ್ಥಿಯನ್ನು ಪರಿಗಣಿಸಿ, ಪುನರಾವಲೋಕನ ಮಾಡಿ ಕಳೆದ 15 ದಿನಗಳಿಂದ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಸತತವಾಗಿ ಏರಿಕೆಯಾಗುತ್ತಿರುವುದನ್ನು ಗಮನಿಸಿಸಲಾಗಿದೆ.
ಪ್ರಸ್ತುತ ಕೋವಿಡ್-19 ಸೋಂಕು ಹರಡುವ ಆತಂಕವು ಹೆಚ್ಚಾಗಿರುವ ಹಿನ್ನಲೆಯಲ್ಲಿ ಸರ್ಕಾರದ ಆದೇಶದಲ್ಲಿ ಸೂಚಿಸಿರುವಂತೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಬೀದರ್ ಜಿಲ್ಲಾ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿರುವುದರಿಂದ, ನಿಷೇಧಾಜ್ಞೆ ಜಾರಿಗೊಳಿಸುವುದು ಸೂಕ್ತ ಎಂದು ಪರಿಗಣಿಸಿ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಸಿ.ಆರ್.ಪಿ.ಸಿ. ಕಾಯ್ದೆ 1973 ರ ಕಲಂ 144 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಏಪ್ರೀಲ್ 27ರ ರಾತ್ರಿ 9 ಗಂಟೆಯಿಂದಲೇ ಅನ್ವಯವಾಗುವಂತೆ ಬರುವ ಮೇ 12ರ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಹಾಗೂ ರಾಜ್ಯ ಸರ್ಕಾರದಿಂದ ಹೊರಡಿಸಿರುವ ಆದೇಶದಂತೆ ಕೋವಿಡ್-19ರ ಮಾರ್ಗಸೂಚಿಗಳನ್ನು ಹೊರಡಿಸಿ ಆದೇಶಿಸಲಾಗಿದೆ.
ಆದೇಶ ಉಲ್ಲಂಘಿಸಿದರೆ ಕ್ರಮ: ಯಾವುದೇ ವ್ಯಕ್ತಿ ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹರವ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 51 ರಿಂದ 60 ರ ಜೊತೆಗೆ ಭಾರತೀಯ ದಂಡ ಸಂಹಿತೆಯ ಕಲಂ 188 ರ ರೀತ್ಯಾ ಕಾನೂನು ಕ್ರಮ ಜರುಗಿಸಲಾಗುವುದು.
ಪೊಲೀಸ್ ಇಲಾಖೆಗೆ ಆದೇಶ: ಈ ನಿಷೇಧಾಜ್ಞೆಯು ಎದ್ದು ಕಾಣುವಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸುವ ಮೂಲಕ ಮತ್ತು ಧ್ವನಿವರ್ದಕ ಬಳಸಿ ಪ್ರಚಾರ ಮಾಡಲು ಹಾಗೂ ಈ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಲು ಪೊಲೀಸ್ ಇಲಾಖೆಗೆ ಆದೇಶಿಸಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.