ಬೀದರ, ಏ. 08: ಬೀದರ ಜಿಲ್ಲೆಯಲ್ಲಿ ಹೆಚ್ಚಿನ ಮತದಾನವಾಗುವಂತೆ ಜನರಿಗೆ ಮತದಾನದ ಮಹತ್ವ ಕುರಿತು ಅಧಿಕಾರಿಗಳು ಹೆಚ್ಚಿನ ಪ್ರಚಾರ ನೀಡಬೇಕೆಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ ಹೇಳಿದರು.
ಅವರು ಶುಕ್ರವಾರ ಬೀದರ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳು, ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಇತರೆ ಅಧಿಕಾರಿಗಳಿಗೆ ಮತದಾನದ ಮಹತ್ವ ಕುರಿತು ಕರೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿ.ಎಲ್.ಓಗಳು ಜನರ ನೇರ ಸಂಪರ್ಕ ಅಧಿಕಾರಿಗಳಾಗಿರುವುದರಿಂದ ಜನರಿಗೆ ಮತದಾನ ಮಾಡುವಂತೆ ಅರಿವು ಮೂಡಿಸುವ ಜವಾಬ್ದಾರಿ ತಮ್ಮ ಮೇಲೆ ಹೆಚ್ಚಿದೆ ಹಾಗೂ ಚುನಾವಣೆಗೆ ನಿಯೋಜಿತ ಅಧಿಕಾರಿಗಳು ಮೊದಲು ತಮ್ಮ ಕರ್ತವ್ಯದ ಬಗ್ಗೆ ಮತ್ತು ಚುನಾವಣಾ ಕಾರ್ಯಚಟುವಟಿಕೆಗಳ ಬಗ್ಗೆ ಮೊದಲು ತಿಳಿದುಕೊಂಡಾಗ ಮಾತ್ರ ಜನರಿಗೆ ಮಾಹಿತಿ ನೀಡಲು ಅನುಕೂಲವಾಗುತ್ತದೆ ಎಂದು ಹೇಳಿದರು.
ನಾನು ಬೀದರ ಜಿಲ್ಲೆಯ 10 ರಿಂದ 15 ಮತಗಟ್ಟೆಗಳಿಗೆ ಭೇಟಿ ಕೊಟ್ಟು ಬಂದಿದ್ದೆನೆ. ಕೆಲವೊಂದು ಮತಗಟ್ಟೆಗಳ ಬಿ.ಎಲ್.ಓಗಳು ಚುನಾವಣೆ ಕಾರ್ಯಚಟುವಟಿಕೆ ಹಾಗೂ ವಿವಿಧ ಚುನಾವಣೆಗೆ ಸಂಬಂಧಿಸಿದ ಯ್ಯಾಪ್‍ಗಳಾದ ಓಟರ್ ಹೆಲ್ಪ್ ಲೈನ್, ಸುವಿಧಾ, ಸಿ-ವಿಜಿಲ್ ಸೇರಿದಂತೆ ಇತರ ಯ್ಯಾಪ್‍ಗಳ ಬಗ್ಗೆ ಹೆಚ್ಚಿನ ರೀತಿಯಲ್ಲಿ ತಿಳಿದುಕೊಂಡು ಅವುಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ತಮಗೆ ತಿಳಿಯದ ವಿಷಯಗಳನ್ನು ಇತರರಿಂದ ತಿಳಿದುಕೊಂಡು ಚುನಾವಣಾ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದರು.
ಕಡಿಮೆ ಮತದಾನವಾದ ಮತಗಟ್ಟೆಗಳಲ್ಲಿ ಹೆಚ್ಚಿನ ಮತದಾನವಾಗುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಮತಗಟ್ಟೆಗಳಲ್ಲಿ ಮತದಾನ ದಿನದಂದು ಎಲ್ಲಾ ರೀತಿಯಲ್ಲಿ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಎಲ್ಲರೂ ಒಟ್ಟಾಗಿ ಕೆಲಸ ಮಾಡಿದಾಗ ಚುನಾವಣೆ ಯಶಸ್ವಿಯಾಗಿ ನಡೆಯುತ್ತದೆ ಮತ್ತು ಹೆಚ್ಚಿನ ಮತದಾನವಾಗಬೇಕಾದರೆ ಸ್ವೀಪ್ ಕಾರ್ಯಚಟುವಟಿಕೆಗಳು ಜಿಲ್ಲೆಯಲ್ಲಿ ಹೆಚ್ಚಾಗಿ ನಡೆಸುವುದು ಅತ್ಯವಶಕವಾಗಿದೆ ಎಂದರು.
ಬೀದರ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶಿಲ್ಪಾ .ಎಂ ಅವರು ಮಾತನಾಡಿ ನಾವು ಹಲವಾರು ಮತಗಟ್ಟೆಗಳಿಗೆ ಭೇಟಿ ನೀಡಿದ್ದು ಬಿ.ಎಲ್.ಓಗಳು ಸೈನಿಕರಂತೆ ಸ್ವೀಪ್ ಕಾರ್ಯಕ್ರಮಗಳನ್ನು ಮಾಡಬೇಕು. ಮೂರು-ನಾಲ್ಕು ಮತಗಟ್ಟೆಗಳು ಒಂದೆಕಡೆ ಇರುವಲ್ಲಿ ಮೂರ ರಿಂದ ನಾಲ್ಕು ಸಾವಿರ ಜನರಿರುತ್ತಾರೆ ಅಲ್ಲಿ ಹೆಚ್ಚಿನ ಪ್ರಚಾರ ನೀಡಬೇಕು. ಮತಗಟ್ಟೆಯಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಬೇಕು ಎಂದರು.
ಬೀದರ ಜಿಲ್ಲಾ ಚುನಾವಣಾ ಪ್ರಚಾರ ರಾಯಭಾರಿಯಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಷಾ ರಶೀದ್ ಅಹ್ಮದ್ ಹಾಗೂ ವಿಶೇಷ ಚೇತನರ ಜಿಲ್ಲಾ ಚುನಾವಣಾ ಪ್ರಚಾರ ರಾಯಭಾರಿಯಾಗಿ ತುಕಾರಾಂ ಮೇತ್ರೆ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಸಾರ್ವಜನಿಕರು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಹೇಳಿದರು.
ಸಭೆಗೂ ಮುನ್ನ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳು ಹಳ್ಳಿಕೇಡ್ ಕೆ, ಮುಸ್ತರವಾಡಿ, ಹುಮನಾಬಾದ, ಹುಡಗಿ, ಮನ್ನಾಖೇಳಿ, ಬಗ್ದಲ್ ಹಾಗೂ ಬೀದರ ನಗರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಅಲ್ಲಿಯ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸುವದರ ಜೊತೆಗೆ ಬಿ.ಎಲ್.ಓಗಳಿಗೆ ಹೆಚ್ಚಿನ ಮತದಾನ ಆಗುವಂತೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಸೂಚನೆ ನೀಡದರು.
ಈ ಸಭೆಯಲ್ಲಿ ರಾಜ್ಯ ಮಟ್ಟದ ಚುನಾವಣಾ ಮಾಸ್ಟರ್ ತರಬೇತಿದಾರರು ಹಾಗೂ ಸ್ವೀಪ್ ಅಧಿಕಾರಿ ಡಾ. ಗೌತಮ ಅರಳಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಗಿರೀಶ್ ರಂಜೋಳಕರ್, ಜಿಲ್ಲಾ ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಸುರೇಖಾ ಮುನ್ನೊಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ತಾಲೂಕು ಮಟ್ಟದ ಸ್ವೀಪ್ ಸಮಿತಿ ಅಧ್ಯಕ್ಷರು, ಸೇರಿದಂತೆ ಇತರರು ಉಪಸ್ಥಿತರಿದ್ದರು.