ಬೀದರ: ಗುಡಿಸಲು ವಾಸಿಗಳಿಗೆ ಆಹಾರ ಕಿಟ್ ವಿತರಣೆ

ಬೀದರ:ಮೇ.31: ಚೌಳಿ ಕಮಾನ್ ಒಳಗಿನ ಆದಿವಾಸಿಗಳು ಸೇರಿದಂತೆ ನಗರದಲ್ಲಿರುವ ವಿವಿಧ ಗುಡಿಸಲು ವಾಸಿಗಳಿಗೆ ಕಲ್ಯಾಣ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ವತಿಯಿಂದ ಅಕ್ಕಿ, ಗೋಧಿ, ಬೇಳೆ, ಎಣ್ಣೆ, ಖಾರಾ ಸೇರಿದಂತೆ ವಿವಿಧ ಬಗೆಯ 300ಕ್ಕೂ ಅಧಿಕ ಆಹಾರದ ಕಿಟ್‍ಗಳು ವಿತರಿಸಲಾಯಿತು.

ಬ್ಯಾಂಕ್‍ನ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರ ಮಹಾ ಮಂಡಳದ ನಿರ್ದೇಶಕ ಗುರುನಾಥ ಜ್ಯಾಂತಿಕರ್ ಅವರ ನೇತೃತ್ವದಲ್ಲಿ ಆಹಾರದ ಕೀಟ್‍ಗಳು ವಿತರಿಸಲಾಯಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜ್ಯಾಂತಿಕರ್ ಅವರು, ಕಳೆದ ವರ್ಷದಿಂದ ಕೋವಿಡ್ ಮಹಾಮಾರಿಯು ಇಡೀ ವಿಶ್ವವನ್ನು ಬೆಂಬಿಡದೆ ಕಾಡುತ್ತಿದೆ. ಹಾಗೇ ನಮ್ಮ ದೇಶವನ್ನು, ಅದರಲ್ಲೂ ನಮ್ಮ ರಾಜ್ಯ ಹಾಗೂ ನಮ್ಮ ಜಿಲ್ಲೆಯನ್ನು ಸಹ ಆರ್ಥಿಕ ಸ್ಥಿತಿಯಿಂದ ಕಂಗೆಡುವಂತೆ ಮಾಡಿದ್ದು ಬಡವರ ಜೀವನ ದುಸ್ತರವಾಗತೊಡಗಿದೆ, ಅವರ ಕೈಗೆ ಕೆಲಸವಿಲ್ಲದೇ ಜೀವನ ನಡೆಸುವುದೇ ಕಷ್ಟ ಸಾಧ್ಯವಾದ ಕಾರಣ ಉಳ್ಳುವರು ಇಲ್ಲದವರ ಕೈ ಹಿಡಿಯುವ ಉದ್ದೇಶದಿಂದ ನಮ್ಮ ಬ್ಯಾಂಕ್‍ನಿಂದ ಈ ಆಹಾರ ಕಿಟ್‍ಗಳು ನೀಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸೌಹಾರ್ದ ಸಹಕಾರ ಒಕ್ಕೂಟದ ನಿರ್ದೇಶಕ ರಾಜಶೇಖರ ನಾಗಮೂರ್ತಿ, ಸಮಾಜ ಸುಧಾರಕ ಶ್ರೀಕಾಂತ ಮೋದಿ, ವಿಜಯಕುಮಾರ ಗಜರೆ, ಬ್ಯಾಂಕ್‍ನ ವ್ಯವಸ್ಥಾಪಕ ಶಿವರಾಜ, ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.