ಬೀದರ-ಕಲಬುರಗಿ ಜಿಲ್ಲೆಗಳಿಗೆ ಶೀಘ್ರದಲ್ಲಿಯೇ ನೂರುಬಸ್ಸುಗಳನ್ನು ಒದಗಿಸಲಾಗುತ್ತದೆ:ಸಚಿವ ಬಿ. ಶ್ರೀರಾಮುಲು

ಬೀದರ ಜು 20: ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಂತ ಹಂತವಾಗಿ ಹೊಸ ಬಸ್ಸುಗಳನ್ನು ಒದಗಿಸಲಾಗುವುದು, ವಿಶೇಷವಾಗಿ ಬೀದರ ಮತ್ತು ಕಲಬುರಗಿ ಜಿಲ್ಲೆಗಳಿಗೆ ಶೀಘ್ರದಲ್ಲಿಯೇ ನೂರು ಹೊಸ ಬಸ್ಸುಗಳನ್ನು ಒದಗಿಸಲಾಗುವುದು ಎಂದು ಸಾರಿಗೆ ಸಚಿವರು ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವರು ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಹೇಳಿದರು.

ಅವರು ಮಂಗಳವಾರ ಬೀದರನ ಪ್ರಕಾಶ ನಗರದ ನೌಬಾದನಲ್ಲಿರುವ ಬೀದರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ಬಸ್ಸುಗಳನ್ನು ಖರೀದಿಸಲು 100 ಕೋಟಿ ಅನುದಾನವನ್ನು ಮುಖ್ಯಮಂತ್ರಿಗಳು ನೀಡಲು ಒಪ್ಪಿರುತ್ತಾರೆ. ಬಡ ಮತ್ತು ಮಧ್ಯಮ ವರ್ಗದ ಜನರು ಈ ಬಸ್ಸುಗಳಲ್ಲಿ ತಿರುಗಾಡುತ್ತಾರೆ ಅವರಿಗೆ ಅನುಕೂಲವಾಗಲು ಹೊಸ ಬಸ್ಸುಗಳನ್ನು ಖರೀದಿಸಲಾಗುತ್ತದೆ. ಬೀದರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಬೇಡಿಕೆ ಬಹುದಿನಗಳದ್ದಾಗಿತ್ತು ಅದು ಇಂದು ನನಸಾಗಿದೆ, ನಮ್ಮ ಇಲಾಖೆ ಬಹಳಷ್ಟು ಜನಸೇವೆಯನ್ನು ಮಾಡುವ ಗುರಿಯನ್ನು ಇಟ್ಟುಕೊಂಡಿದೆ.

ಇಡೀ ರಾಜ್ಯದಲ್ಲಿ ನಮ್ಮ ಇಲಾಖೆ ಒಳ್ಳೆಯ ಕೆಲಸ ಮಾಡುತ್ತಿದೆ ಅಪಘಾತಗಳನ್ನು ಕಡಿಮೆ ಮಾಡಲು ರಸ್ತೆ ಸುರಕ್ಷತೆಗಾಗಿ ಕೇಂದ್ರ ಸರ್ಕಾರವು ಹೆಚ್ಚಿನ ಅನುದಾನವನ್ನು ಪ್ರತಿ ವರ್ಷ ನೀಡುತ್ತದೆ. ರಸ್ತೆ ಸುರಕ್ಷತೆಗಾಗಿ 295 ಕೋಟಿ ಹಣವನ್ನು ತೆಗೆದಿಡುವ ಕೆಲಸ ಮಾಡಿದ್ದೇವೆ, ನಮ್ಮ ಇಲಾಖೆಯಲ್ಲಿ 30 ಸೇವೆಗಳು ಸಂಪರ್ಕ ರಹಿತ ಅನ್‍ಲೈನ್ ಸೇವೆಯನ್ನು ಪ್ರಥಮವಾಗಿ ಒದಗಿಸುವ ಕೆಲಸ ಮಾಡಿದ್ದೇವೆ. ಹಳದಿ ಬೋರ್ಡಿನ ವಾಹನಗಳಿಗೆ ಈ ಹಿಂದೆ ಮೂರು ತಿಂಗಳಿಗೊಮ್ಮೆ ತೆರಿಗೆ ಕಟ್ಟುವ ಪದ್ದತಿ ಇತ್ತು ಇದರಿಂದ ನಮಗೆ ಹೊರೆಯಾಗುತ್ತದೆ ಎಂದು ವಾಹನ ಚಾಲಕರು ತಮ್ಮ ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದಾಗ ತಿಂಗಳಿಗೊಮ್ಮೆ ಕಟ್ಟುವ ವ್ಯವಸ್ಥೆ ಮಾಡಲಾಗಿದ್ದು 45 ಸಾವಿರ ವಾಹನಗಳಿಗೆ ಈ ವ್ಯವಸ್ಥೆ ಮಾಡಲಾಗಿದೆ ಮತ್ತು ಈ ಹಿಂದೆ 15 ದಿನಗಳಿಗೊಮ್ಮೆ ತೆರಿಗೆ ಕಟ್ಟುವ ಪದ್ದತಿ ಇತ್ತು ಇದರಿಂದ ಸಮಸ್ಯೆಯಾಗುತ್ತಿದೆ ಎಂದು ದೂರು ಬಂದ ಹಿನ್ನಲೆಯಲ್ಲಿ ತಿಂಗಳಿಗೊಮ್ಮೆ ತೆರಿಗೆ ಕಟ್ಟುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ, ಟ್ಯಾಕ್ಸಿ ಡ್ರೈವರ್‍ಗಳ ಆರೋಗ್ಯ ಮತ್ತು ಅವರ ಮಕ್ಕಳು ಶಿಕ್ಷಣ ಪಡೆಯಬೇಕು ಎಂಬ ಕಾರಣಕ್ಕಾಗಿ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಅರವಿಂದ ಅರಳಿ ಅವರು ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಬಹಳಷ್ಟು ಹಳ್ಳಿಗಳಿಗೆ ಬಸ್ಸುಗಳು ಹೋಗುವುದಿಲ್ಲ ಇದರಿಂದ ಬಡ ಮಕ್ಕಳು ಶಾಲೆಗೆ ಹೋಗಿ ಬರುವುದಕ್ಕೆ ಕಷ್ಟವಾಗುತ್ತದೆ ಹಾಗಾಗಿ ಬಸ್ಸುಗಳನ್ನು ಎಲ್ಲಾ ಹಳ್ಳಿಗಳಿಗೆ ಒದಗಿಸಬೇಕು ಮತ್ತು 371(ಜೆ) ಅಡಿಯಲ್ಲಿ ನಮ್ಮ ಭಾಗಕ್ಕೆ ಬಸ್ಸು ಮತ್ತು ಬಸ್ಸ್ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಹಾಗೂ ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವಂತೆ ಸಚಿವರಿಗೆ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೀದರ ಉತ್ತರ ಕ್ಷೇತ್ರದ ಶಾಸಕರಾದ ರಹೀಮ್ ಖಾನ್ ಅವರು ಮಾತನಾಡಿ ಸುಮಾರು ವರ್ಷಗಳ ಬೇಡಿಕೆಯಾದ ಬೀದರ ಪ್ರಾದೇಶಿಕ ಸಾರಿಗೆ ಕಚೇರಿ ಅಡಿಗಲ್ಲು ಸಮಾರಂಭವನ್ನು ನೆರವೇರಿಸಿದ ಸಚಿವರಿಗೆ ಅಭಿನಂದನೆ, ಈ ಕಟ್ಟಡ ನಿಗದಿತ ಕಾಲಮಿತಿಯಲ್ಲಿ ಮುಗಿಯುವಂತಾಗಬೇಕು ಮತ್ತು ಬೀದರ ಗಡಿ ಜಿಲ್ಲೆಯಾಗಿರುವುದರಿಂದ ಗಡಿ ಭಾಗದಲ್ಲಿ ವಾಹನಗಳನ್ನು ಓಡಾಡುವ ಲೈಸೆನ್ಸ್ ಕೊಡುವ ಇನ್ನೊಂದು ಕಚೇರಿ ನಮ್ಮ ಜಿಲ್ಲೆಗೆ ಮಾಡಬೇಕು ಹಾಗೂ ಶಾಲಾ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಬಸ್ಸುಗಳನ್ನು ಓಡಿಸಬೇಕು ಅವುಗಳು ಸರಿಯಾದ ಸಮಯದಲ್ಲಿ ಸಂಚರಿಸದೇ ಇರುವುದರಿಂದ ಶಾಲಾ ಮಕ್ಕಳಿಗೆ ತೊಂದರೆ ಆಗುತ್ತಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಾದ ಟಿ.ಎಚ್.ಎಮ್.ಕುಮಾರ, ಬೆಂಗಳೂರು ಅಪರ ಸಾರಿಗೆ ಆಯುಕ್ತರಾದ (ಆಡಳಿತ) ಬಿ.ಪಿ.ಉಮಾಶಂಕರ್, ಬೆಂಗಳೂರು ಅಪರ ಸಾರಿಗೆ ಆಯುಕ್ತರು, ಪ್ರವರ್ತನ (ದಕ್ಷಿಣ) ಸಿ.ಮಲ್ಲಿಕಾರ್ಜುನ, ದಾರವಾಡ ಸಾರಿಗೆ ಅಪರ ಆಯುಕ್ತರಾದ ಮಾರುತಿ ಸಾಮ್ರಾಣಿ, ಕಲಬುರಗಿ ವಿಭಾಗದ ಜಂಟಿ ಸಾರಿಗೆ ಆಯುಕ್ತರಾದ ಬಿ.ನೂರ್ ಮಹ್ಮದ್ ಬಾಷಾ, ಬೀದರ ಪ್ರಾದೇಶಿಕ ಸಾರಿಗೆ ಅಧಿಕಾರಿ ನಾರಾಯಣಸ್ವಾಮಿ ನಾಯ್ಕ್ ಟಿ.ಎಲ್., ವಾಹನ ಮಾಲೀಕರ ಸಂಘದ ಸದಸ್ಯರು ಪದಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.