ಬೀದರ ಏರ್‍ಪೋರ್ಟ್‍ಗೆ ಬಿ.ಶ್ಯಾಮಸುಂದರ ಹೆಸರಿಡಲಿ: ಮಹಾದೇವ ಕಾಂಬಳೆ

ಬೀದರ:ಜ,9: ಬಿ.ಶ್ಯಾಮಸುಂದರ ಅವರು ದಲಿತ ಚಳುವಳಿಯ ನಾಯಕರಾಗಿ, ಮೂಲ ಭಾರತೀಯ ಚಳುವಳಿಯ ಹೋರಾಟಗಾರರಾಗಿ, ಹೈದರಾಬಾದ ಮುಕ್ತಿ ಸಂಗ್ರಾಮದಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. ಆದ್ದರಿಂದ ಬೀದರ ಏರ್‍ಪೋರ್ಟ್‍ಗೆ ಸರ್ಕಾರ ಶ್ಯಾಮಸುಂದರ ಅವರ ಹೆಸರು ನಾಮಕರಣ ಮಾಡಬೇಕು ಎಂದು ಮಹಾದೇವ ಕಾಂಬಳೆ ನುಡಿದರು.
ಬಿ.ಶ್ಯಾಮಸುಂದರ ಅವರ 112ನೇ ಜನ್ಮದಿನಾಚರಣೆ ನಿಮಿತ್ಯ ಜನವರಿ 10ರಂದು ನಗರದ ರಂಗಮಂದಿರದಲ್ಲಿ ಆಯೋಜಿಸಲಾಗಿರುವ ಪುಸ್ತಕ ಬಿಡುಗಡೆ ಹಾಗೂ ಮೂಲಭಾರತಿ ಭೀಮರತ್ನ ಪ್ರಶಸ್ತಿ ಪ್ರದಾನ ಸಮಾರಂಭ” ಕುರಿತು ನಗರದ ಬರೀದಶಾಹಿ ಹೊಟೇಲ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಆಯೋಜಕರಾದ ಮಹಾದೇವ ಕಾಂಬಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಸರ್ಕಾರದ ವತಿಯಿಂದ ಪ್ರತಿ ವರ್ಷ ಹೋರಾಟಗಾರ ಬಿ.ಶ್ಯಾಮಸುಂದರ ಅವರ ಜಯಂತಿ ಆಚರಿಸಬೇಕು. ಸರ್ಕಾರದ ವತಿಯಿಂದ ಅವರ ಜೀವನ ಮತ್ತು ಸಾಧನೆಯಾಧಾರಿತ ಗ್ರಂಥ ಪ್ರಕಟಿಸಬೇಕು ಎಂದರಲ್ಲದೆ ಜನವರಿ 10 ರಂದು ಬೆಳಿಗ್ಗೆ 11 ರಂದು ಪ್ರಥಮ ಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ಬಿ.ಶ್ಯಾಮಸುಂದರ ಅವರ ಸೋದರಳಿಯ ನರಸಿಂಗರಾವ ಹೈದರಾಬಾದ ಉದ್ಘಾಟನೆ ಮಾಡಲಿದ್ದಾರೆ. ವಿಶೇಷ ಅತಿಥಿಗಳಾಗಿ ಪಂಜಾಬ್‍ನಿಂದ ದಾದಾಸಾಹೇಬ ಕಾನ್ಸಿರಾಮ ಅವರ ಸೋದರಳಿಯ ಪ್ರಭಜಿತಸಿಂಗ್ ಆಗಮಿಸಲಿದ್ದಾರೆ. ಕಲಬುರಗಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿ.ಟಿ ಕಾಂಬಳೆ, ಮಾಜಿ ಶಾಸಕ ಜುಲ್ಫೆಕಾರ್ ಹಾಸ್ಮಿ, ಸಂವಿಧಾನ ರಕ್ಷಣಾ ಸಮಿತಿಯ ಮಹಾಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಬೆಲ್ದಾರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರೇಮಸಾಗರ ದಾಂಡೇಕರ್, ನ್ಯಾಯವಾದಿ ಮಾಣಿಕರಾವ ಗೋಡಬಲೆ, ಸಮಾಂತರ ಭಾರತ ನಿರ್ದೇಶಕ ಎಸ್.ವರುಣಕುಮಾರ, ಬಿ.ಶ್ಯಾಮಸುಂದರ ಅವರ ಒಡನಾಡಿ ಪ್ರಕಾಶ ಮೂಲಭಾರತಿ, ಬಾಮ್‍ಸೇಫ್ ಕೇಂದ್ರ ಕಾರ್ಯಕಾರಿಣಿ ಸದಸ್ಯ ಬಿ.ಬಿ.ಮೇಶ್ರಂ, ಜೆಸ್ಕಾಂ ಲೆಕ್ಕಾಧಿಕಾರಿ ಸುಮಂತ ಕಟ್ಟಿಮನಿ ವೇದಿಕೆ ಮೇಲೆ ಉಪಸ್ಥಿತರಿರಲಿದ್ದಾರೆ. ಅಧ್ಯಕ್ಷತೆಯನ್ನು ರಾಷ್ಟ್ರೀಯ ಮೂಲನಿವಾಸಿ ಸಂಘದ ರಾಷ್ಟ್ರೀಯ ಅಧ್ಯಕ್ಷ ತಾರಾರಾಮ ಮೇಹ್ನಾ ವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಪ್ರಥಮ ಗೋಷ್ಠಿಯ ವಿವರಣೆ ನೀಡಿದರು.
ಮಧ್ಯಾಹ್ನದ ಗೋಷ್ಠಿ 2.30 ರಿಂದ ಆರಂಭವಾಗಲಿದ್ದು, ಬಿ.ಶ್ಯಾಮಸುಂದರ ಭಾರತಿ ಭೀಮಸೇನೆ ಸಂಘಟನೆ ಮುಖಾಂತರ ಮೂಲ ಭಾರತಿ ಸಮಾಜ ನಿರ್ಮಾಣ ಮಾಡುವ ಉದ್ದೇಶ ಮತ್ತು ಹಿನ್ನೆಲೆ ವಿಶ್ಲೇಷಣೆ ಅಥವಾ ಫುಲೆ-ಡಾ.ಬಿ.ಆರ್.ಅಂಬೇಡ್ಕರ ಅವರ ಚಳುವಳಿಯನ್ನು ಅಂಬೇಡ್ಕರೋತ್ತರ ಮುನ್ನಡೆಸಲು ಭಾರತಿ ಭೀಮ ಸೇನೆಯ ಕೊಡುಗೆ ಕುರಿತು ವಿಶೇಷ ಚಿಂತನಗೋಷ್ಠಿ ಜರುಗಲಿದೆ.
ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಾರುತಿ ಡಿ.ಮಾಲೆ, ಹೈದರಾಬಾದ ವಿಧಾನ ಪರಿಷತ್ ಸದಸ್ಯರಾದ ಸೈಯದ್ ಅಮೀನ್ ಜಾಫ್‍ರಿ ಆಗಮಿಸಲಿದ್ದಾರೆ.
ವಿಶೇಷ ಅತಿಥಿಗಳಾಗಿ ಪುಣೆಯಿಂದ ಅಣ್ಣಾಭಾವು ಸಾಠೆರವರ ಮರಿಮೊಮ್ಮಗ ವಿಲಾಸ ಸಾಠೆ, ಕಾನ್ಸಿರಾಮ್ ಬಾಮ್‍ಸೇಫ್ ಹರಿಯಾಣದ ರಾಷ್ಟ್ರೀಯ ಅಧ್ಯಕ್ಷ ಮಣಿರಾಮ್, ಡಿ.ಶಿವಶಂಕರ, ಮಾವಳಿ ಶಂಕರ, ಸೈಯದ್ ಮಕ್ಸೂದ್, ಪ್ರೊ.ಅನ್ವರ್ ಖಾನ್, ವಿಠಲದಾಸ ಪ್ಯಾಗೆ, ರಮೇಶ ಡಾಕುಳಗಿ ಸೇರಿದಂತೆ ಅನೇಕರು ಆಗಮಿಸುತ್ತಿದ್ದಾರೆ. ಅಧ್ಯಕ್ಷತೆಯನ್ನು ಮುಂಬೈ ಬಾಮ್‍ಸೇಫ್ ರಾಷ್ಟ್ರೀಯ ಅಧ್ಯಕ್ಷ ಬಿ.ಡಿ.ಬೋರಕರ್ ವಹಿಸಲಿದ್ದಾರೆ.
ಬಿ.ಶ್ಯಾಮಸುಂದರ ಅವರ ಪುಸ್ತಕ ಬಿಡುಗಡೆ ನಡೆಯಲಿದೆ. ಮೂಲಭಾರತಿ ಭೀಮರತ್ನ ಪ್ರಶಸ್ತಿಯನ್ನು ನರಸಿಂಗರಾವ ತೆಲಂಗಾಣ, ಪ್ರಕಾಶ ಮೂಲಭಾರತಿ ಕಲಬುರಗಿ ಹಾಗೂ ಜುಲ್ಫೆಕಾರ್ ಹಾಸ್ಮಿ ಬೀದರ ಇವರನ್ನು ಪ್ರದಾನ ಮಾಡಲಾಗುತ್ತಿದೆ ಎಂದು ಕಾಂಬಳೆ ತಿಳಿಸಿದರು.
ಆದ್ದರಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಜುಲ್ಫೆಕಾರ್ ಹಾಸ್ಮಿ, ಅಶೋಕಕುಮಾರ ಮಾಳಗೆ, ಸುನೀಲಕುಮಾರ ಡೊಳ್ಳೆ, ಸುರೇಶ ಟಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.