ಬೀದರ್-ಹೈದರಾಬಾದ್ ನಡುವೆ ತಡೆರಹಿತ ಬಸ್: ಈಶ್ವರ ಖಂಡ್ರೆ ಭರವಸೆ

ಬೀದರ್:ಜು.24: ಬೀದರ್-ಹೈದರಾಬಾದ್ ನಡುವೆ ತಡೆರಹಿತ ಬಸ್ ಬಿಡಬೇಕೆಂಬ ಬೇಡಿಕೆ ಈಗಾಗಲೇ ನನ್ನ ಗಮನಕ್ಕೆ ಬಂದಿದೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಈ ಸಂಬಂಧ ಸೂಚನೆ ಕೊಟ್ಟು ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಭರವಸೆ ನೀಡಿದರು.

ಹೈದರಾಬಾದ್‍ನ ಐ.ಟಿ., ಬಿ.ಟಿ. ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಂದ ನಗರದಲ್ಲಿ ಭಾನುವಾರ ಮನವಿ ಪತ್ರ ಸ್ವೀಕರಿಸಿ ಅದಕ್ಕೆ ಸಚಿವರು ಮೇಲಿನಂತೆ ಪ್ರತಿಕ್ರಿಯಿಸಿದರು.

ಬೀದರ್-ಹೈದರಾಬಾದ್ ನಡುವೆ ನಿತ್ಯ 50ಕ್ಕೂ ಹೆಚ್ಚು ಬಸ್‍ಗಳು ಸಂಚರಿಸುತ್ತವೆ. ಇದರಲ್ಲಿ ಒಂದೇ ಒಂದು ಬಸ್ ಕೂಡ ತಡೆ ರಹಿತ ಇಲ್ಲ. ಆದರೆ, ನೆರೆಯ ರಾಜ್ಯ ತೆಲಂಗಾಣದವರು ಆರು ಎಕ್ಸ್‍ಪ್ರೆಸ್ ಬಸ್‍ಗಳನ್ನು ಓಡಿಸುತ್ತಿದ್ದಾರೆ. ಪ್ರಯಾಣಿಕರ ದಟ್ಟಣೆ ಇರುವುದರಿಂದ ಅವುಗಳು ಸಾಲುತ್ತಿಲ್ಲ. ರಾಜ್ಯದ ಬಸ್‍ಗಳು ಮೂರುವರೆಯಿಂದ ನಾಲ್ಕು ಗಂಟೆ ಸಮಯ ತೆಗೆದುಕೊಳ್ಳುತ್ತಿವೆ. ತಿಂಡಿ, ಊಟದ ನೆಪದಲ್ಲಿ ಜಹೀರಾಬಾದ್ ಧಾಬಾದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲಹರಣ ಮಾಡುತ್ತಿದ್ದಾರೆ. ಪ್ರತಿಯೊಂದು ಊರಿನೊಳಗೆ ತೆರಳಿ ಬಸ್ ನಿಲುಗಡೆ ಮಾಡುತ್ತಿದ್ದಾರೆ. ಇದರಿಂದ ದೈನಂದಿನ ಕೆಲಸಗಳಿಗೆ ಹೋಗುವವರಿಗೆ ಬಹಳ ತೊಂದರೆ ಉಂಟಾಗುತ್ತಿದೆ. ಸಕಾಲಕ್ಕೆ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಗೋಳು ತೋಡಿಕೊಂಡರು.

ಅದರಲ್ಲೂ ಐ.ಟಿ., ಬಿ.ಟಿ.ಯಲ್ಲಿ ಹೆಚ್ಚಿನ ಯುವಕರು ಕೆಲಸ ನಿರ್ವಹಿಸುತ್ತಾರೆ. ಬೀದರ್‍ನಿಂದ ನಿತ್ಯ ಹೈದರಾಬಾದ್‍ಗೆ ಹೋಗಿ ಬರುತ್ತಾರೆ. ಬೆಳಿಗ್ಗೆ 5ರಿಂದ 8ರ ವರೆಗೆ, ಸಂಜೆ 5ರಿಂದ 8ರ ವರೆಗೆ ಕನಿಷ್ಠ ಎರಡ್ಮೂರು ತಡೆರಹಿತ ಬಸ್‍ಗಳನ್ನು ಬಿಟ್ಟರೆ ಬಹಳ ಅನುಕೂಲವಾಗುತ್ತದೆ. ರಾಜ್ಯದಲ್ಲಿ ಬೆಂಗಳೂರು-ಮೈಸೂರು, ಬೆಂಗಳೂರು-ದಾವಣಗೆರೆ, ಕಲಬುರಗಿ-ಬೀದರ್, ಕಲಬುರಗಿ-ವಿಜಯಪುರ ಹೀಗೆ ಹಲವು ನಗರಗಳ ನಡುವೆ ತಡೆರಹಿತ ಬಸ್‍ಗಳನ್ನು ಓಡಿಸಲಾಗುತ್ತಿದೆ. ಇದಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಇದೆ. ಬೇಕಾದರೆ ಇದಕ್ಕೆ ಸ್ವಲ್ಪ ದರ ಹೆಚ್ಚಿಸಲಿ. ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಕ್ಕೆ ಹೆಸರಾಗಿದೆ. ಈ ನಗರಗಳ ನಡುವೆ ಸಂಚರಿಸುವವರ ನೆರವಿಗೆ ಬರಬೇಕು. ಇದು ಸಂಸ್ಥೆಯ ಆರ್ಥಿಕ ಬೆಳವಣಿಗೆ ದೃಷ್ಟಿಯಿಂದಲೂ ಉತ್ತಮ ಎಂದು ಮನವಿಯಲ್ಲಿ ತಿಳಿಸಿದರು.

ಐ.ಟಿ ಉದ್ಯೋಗಿಗಳಾದ ಸಂಗಪ್ಪ, ಬಸವಕುಮಾರ, ಮಲ್ಲಿಕಾರ್ಜುನ ಇತರರಿದ್ದರು.