ಬೀದರ್: ಜೂ.12:ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಸಚಿವರಾದ ನಂತರ ಮೊದಲ ಬಾರಿಗೆ ನಗರಕ್ಕೆ ಬಂದ ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಖಾತೆ ಸಚಿವ ರಹೀಂ ಖಾನ್ ಅವರಿಗೆ ಭವ್ಯ ಸ್ವಾಗತ ಕೋರಿ ನಗರದ ಪ್ರಮುಖ ರಸ್ತೆಗಳಲ್ಲಿ ಭಾನುವಾರ ಸಂಜೆ ಮೆರವಣಿಗೆ ಮಾಡಲಾಯಿತು.
ಸಂಜೆ 4ಕ್ಕೆ ನಗರದ ಬಸವೇಶ್ವರ ವೃತ್ತದಲ್ಲಿ ಸ್ವಾಗತ ಕಾರ್ಯಕ್ರಮಕ್ಕೆ ಸಮಯ ನಿಗದಿಪಡಿಸಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು, ಸಚಿವದ್ವಯರ ಬೆಂಬಲಿಗರು ಅಲ್ಲಿ ಸೇರಿದ್ದರು. ಆದರೆ, ಸಂಜೆ 7.30ಕ್ಕೆ ಇಬ್ಬರು ಅಲ್ಲಿಗೆ ಬಂದರು. ನಂತರ ಇಬ್ಬರಿಗೂ ಕ್ರೇನ್ ಸಹಾಯದಿಂದ ಬೃಹತ್ ಹೂಮಾಲೆ ಹಾಕಿದರು. ಜಯಘೋಷ ಹಾಕಿದರು. ಬಳಿಕ ನಯಾ ಕಮಾನ್, ಸಿದ್ಧಿ ತಾಲೀಮ್, ಚೌಬಾರ ಮಾರ್ಗವಾಗಿ ತೆರೆದ ವಾಹನದಲ್ಲಿ ಮೆರವಣಿಗೆ ಸಾಗಿತು. ಮಾರ್ಗದುದ್ದಕ್ಕೂ ಅವರ ಬೆಂಬಲಿಗರು ಹೂಮಾಲೆ ಹಾಕಿ ಅಭಿಮಾನ ತೋರಿದರು.
ಬಸವೇಶ್ವರ ವೃತ್ತದಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಸೇರಿದ್ದರಿಂದ ಸಾರ್ವಜನಿಕ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಮೆರವಣಿಗೆ ಹಾದು ಹೋಗುವವರೆಗೆ ಜನ ರಸ್ತೆಯಲ್ಲೇ ಅನಿವಾರ್ಯವಾಗಿ ನಿಲ್ಲಬೇಕಾಯಿತು.
ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮುಖಂಡರಾದ ಅಮೃತರಾವ ಚಿಮಕೋಡ್, ಪಂಡಿತ್ ಚಿದ್ರಿ, ಚಂದ್ರಕಾಂತ ಹಿಪ್ಪಳಗಾಂವ, ಸಂಜಯ್ ಜಾಹಗೀರದಾರ್ ಇತರರಿದ್ದರು. ಸಂಜೆ 6ಕ್ಕೆ ನಗರದ ಜನವಾಡ ರಸ್ತೆಯ ಝೀರಾ ಕನ್ವೆನ್ಷನ್ ಹಾಲ್‍ನಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಆದರೆ, ಮೆರವಣಿಗೆ 7.30ಕ್ಕೆ ಆರಂಭಗೊಂಡಿದ್ದರಿಂದ ಅದು ಕೂಡ ಸಾಕಷ್ಟು ವಿಳಂಬವಾಗಲಿದೆ.
ಮಧ್ಯಾಹ್ನ 12ರ ಸುಮಾರಿಗೆ ತೆಲಂಗಾಣ ಗಡಿಯ ಶಹಾಪುರ ಗೇಟ್ ಬಳಿ ಇಬ್ಬರಿಗೂ ಸ್ವಾಗತ ಕೋರಲಾಯಿತು. ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಹೂಗುಚ್ಛ ಕೊಟ್ಟು ಬರಮಾಡಿಕೊಂಡರು. ಪಕ್ಷದ ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಪುಷ್ಪಗುಚ್ಛ ಕೊಟ್ಟು ಸ್ವಾಗತಿಸಿದರು.