ಬೀದರ್ ವಿಮಾನ ನಿಲ್ದಾಣ ನಾಮಕರಣಕ್ಕೆ ಸಮುದಾಯಗಳ ಲಾಬಿ

ಬೀದರ;ಡಿ.31: ಜಿಲ್ಲೆಯ ವಿಮಾನ ನಿಲ್ದಾಣ ಲೋಕಾರ್ಪಣೆಯಾಗಿ ವರ್ಷವಾಗಿದೆ. ಈ ಮೂಲಕ ಬೀದರ್​ನಿಂದ ಲೋಹದ ಹಕ್ಕಿಗಳಲ್ಲಿ ಹಾರಾಡಬೇಕೆಂಬ ಇಲ್ಲಿನ ಜನರ ದಶಕಗಳ ಕನಸು ನನಸಾಗಿದೆ. ಇದೀಗ ಈ ವಿಮಾನ ನಿಲ್ದಾಣ ನಾಮಕರಣದ ಕೂಗು ಜೋರಾಗಿದೆ. ಹೌದು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡು ವರ್ಷ ಕಳೆದಿದೆ. ಆದರೆ ಈಗ ಕೆಲ ಸಮುದಾಯಗಳು, ಸಂಘ-ಸಂಸ್ಥೆಗಳು ತಮ್ಮ ತಮ್ಮ ಜಾತಿಯ ಮಹಾತ್ಮರ ಹೆಸರು ನಾಮಕರಣ ಮಾಡಬೇಕೆಂಬ ಒತ್ತಾಸೆ ಹೆಚ್ಚುತ್ತಿದೆ.
ಬೀದರ್ ವಿಮಾನ ನಿಲ್ದಾಣಕ್ಕೆ ನಾಡಿಗೆ ಕೊಡುಗೆ ನೀಡಿರುವ ವಿವಿಧ ಮಹಾತ್ಮರ ಹೆಸರುಗಳು ಕೇಳಿ ಬರಲಾರಂಭಿಸಿದ್ದು, ತಮ್ಮ ತಮ್ಮ ಸಮುದಾಯದ ಗುರುಗಳ ಹೆಸರಿಡಬೇಕು ಎಂದು ಇಲ್ಲಿನ ಯುವಕರು ಸರಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಗಡೀ ಜಿಲ್ಲೆಯಲ್ಲಿ ಕುರುಬ ಸಮುದಾಯದ ಮತಗಳು ಹಾಗೂ ಜನ ಸಂಖ್ಯೆಯೂ ಕೂಡಾ ಜಾಸ್ತಿಯಿದ್ದು ವಿಮಾನ ನಿಲ್ದಾಣಕ್ಕೆ ಬೊಮ್ಮಗೊಂಡೇಶ್ವರ ಹೆಸರು ನಾಮಕರಣ ಮಾಡಬೇಕೆಂದು ಬೊಮ್ಮಗೊಂಡೇಶ್ವರ ಯೂತ್‌ ಬ್ರಿಗೇಡ್‌ ಒತ್ತಾಯಿಸಿದೆ.
ವಿಮಾನ ನಿಲ್ದಾಣ ಇರುವ ಪ್ರದೇಶ ಚಿದ್ರಿ ಸ್ಥಳವು ಬೊಮ್ಮಗೊಂಡೇಶ್ವರರು ಜನ್ಮ ತಾಳಿದ ಇತಿಹಾಸ ಹೊಂದಿರುವ ಐತಿಹಾಸಿಕ ಹಿನ್ನೆಲೆಯ ಸ್ಥಳ. ಬೀದರ್ ಕೋಟೆಯಲ್ಲಿ ನೀರಿನ ದಾಹ ತಣಿಸಲು ನಿರ್ಮಿಸಿದ್ದ ಕೆರೆಯಿಂದ ಹೆಸರುವಾಸಿ ಆಗಿರುವುದರಿಂದ ಬೊಮ್ಮಗೊಂಡೇಶ್ವರರ ಹೆಸರು ಸೂಕ್ತ ಎನ್ನುತ್ತಿದೆ ಕುರುಬ ಸಮುದಾಯ.

ಇನ್ನೂ ಛತ್ರಪತಿ ಶಿವಾಜಿ ಮಹಾರಾಜ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಛತ್ರಪತಿ ಶಿವಾಜಿ ಸೇನಾ ಬೇಡಿಕೆ ಇಟ್ಟಿದೆ. ಅಪ್ರತಿಮ ದೇಶ ಭಕ್ತರಾಗಿದ್ದ ಶಿವಾಜಿ ಮಹಾರಾಜರ ಹೆಸರು ಸರಿಯಾಗಿರುತ್ತದೆ. ಜಿಲ್ಲೆಯಲ್ಲಿ ಮರಾಠಾ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಮಹಾರಾಜರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಶಿವಾಜಿ ಸೇನಾ ಮನವಿ ಮಾಡಿದೆ. ಇದರ ಜೊತೆಗೆ ಬಸವಕಲ್ಯಾಣದಲ್ಲಿ ಶರಣ ಚಳವಳಿ ಮೂಲಕ ವೈಚಾರಿಕ ಕ್ರಾಂತಿ ಮಾಡಿದ. ಶ್ರೀ ಬಸವೇಶ್ವರರ ಹೆಸರನ್ನು ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂಬ ಬೇಡಿಕೆಯೂ ದೊಡ್ಡಮಟ್ಟದಲ್ಲಿ ಇದೆ. ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಸಂಘಟನೆಗಳು ಬಸವಣ್ಣನವರ ಹೆಸರಿಡಲು ಒತ್ತಾಯಿಸಿವೆ.

ಬಸವಣ್ಣ ಜತೆಗೆ ಅಂಬೇಡ್ಕರ್‌ ಹೆಸರೂ ಸಹ ಕೇಳಿ ಬರುತ್ತಿದೆ. ಇನ್ನೂ ಈ ವಿಚಾರದ ಬಗ್ಗೆ ಮಾತನಾಡಿದ ಬೇಲ್ದಾಳ ಶ್ರೀಗಳು ಕಬ್ಬುರ್ಗಿಯ ವಿಮಾನ ನಿಲ್ದಾಣಕ್ಕೆ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಹೆಸರಿಡಬೇಕು. ಬೀದರ್ ವಿಮಾನ ನಿಲ್ದಾಣಕ್ಕೆ ಬಸವೇಶ್ವರ ಕರ್ಮುಭೂಮಿಯೂ ಆಗಿದ್ದು, ಬಸವೇಶ್ವರರ ಹೆಸರಿಡಬೇಕೆಂದು ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಹತ್ತಾರು ಸಮುದಾಯದ ಮುಂಖಡರು ಹಾಗೂ ರಾಜಕೀಯ ಪಕ್ಷದ ಪ್ರಮುಖರು ಸೇರಿಕೊಂಡು ಸರಕಾರಕ್ಕೆ ಈಗಾಗಲೇ ಪತ್ರ, ಮನವಿಗಳನ್ನು ಸಲ್ಲಿಸಿದ್ದಾರೆ. ಆದರೆ ಇನ್ನೂ ಒಬ್ಬರ ಹೆಸರನ್ನಿಟ್ಟು ಉಳಿದ ಸಮಾಜದಲ್ಲಿ ಗೊಂದಲ ಮೂಡಿಸದೇ ಬೀದರ್​ ವಿಮಾನ ನಿಲ್ದಾಣ ಎಂಬ ಹೆಸರೇ ಸೂಕ್ತ ಎಂಬ ಸಲಹೆಗಳು ಸಹ ಬೀದರ್ ಜಿಲ್ಲೆಯ ನಾಗರಿಕರಿಂದ ವ್ಯಕ್ತವಾಗಿರುವುದು ದಿಟ.