ಬೀದರ್ ಬಾಲ್ಯ ವಿವಾಹ ಮುಕ್ತ ಜಿಲ್ಲೆಗೆ ಕೈಜೋಡಿಸಿ

ಭಾಲ್ಕಿ:ಅ.17: ಬೀದರ್ ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸುವ ಸಂಕಲ್ಪಕ್ಕೆ ವಿದ್ಯಾರ್ಥಿಗಳು, ಸಾರ್ವಜನಿಕರು ಕೈಜೋಡಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.

ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ತಳವಾಡ(ಕೆ) ಗ್ರಾಮ ಪಂಚಾಯಿತಿ ಮತ್ತು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‍ನ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯಿದೆ ಜಾರಿಗೆ ಬಂದು ಶತಮಾನೋತ್ಸವ ಹೊಸ್ತಿಲ್ಲಲ್ಲಿದ್ದೇವೆ. ಆದರೆ ಇಂದಿಗೂ ಬಾಲ್ಯ ವಿವಾಹ ಜೀವಂತಿಕೆ ಇರುವುದು ಕಳವಳಕಾರಿ ಸಂಗತಿ.

ಶೈಕ್ಷಣಿಕ ಮತ್ತು ತಂತ್ರಜ್ಞಾನದಲ್ಲಿ ಅಭಿವೃದ್ಧಿ ಸಾಧಿಸುತ್ತಿರುವ ನಮ್ಮ ರಾಜ್ಯದಲ್ಲಿ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ 45 ಸಾವಿರಕ್ಕೂ ಅಧಿಕ ಬಾಲಕಿಯರು ಬಾಲ್ಯ ವಿವಾಹಕ್ಕೆ ಗುರಿಯಾಗಿ ಗರ್ಭ ಧರಿಸಿರುವುದು ಆತಂಕ ತರಿಸಿದೆ. ಇಂತಹ ಸಾಮಾಜಿಕ ಪಿಡುಗು ತಡೆಯುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.

ಬಾಲ್ಯ ವಿವಾಹ ತಡೆಗಟ್ಟುವಿಕೆಯಲ್ಲಿ ವಿದ್ಯಾರ್ಥಿಗಳ ಪಾತ್ರವೂ ದೊಡ್ಡದಿದೆ. ತಮ್ಮ ಬಡಾವಣೆ, ಊರುಗಳಲ್ಲಿ ಬಾಲ್ಯ ವಿವಾಹ ಕಂಡು ಬಂದಲ್ಲಿ ವಿದ್ಯಾರ್ಥಿಗಳು ಅದನ್ನು ವಿರೋಧಿಸಿ ಸಂಬಂಧಿತರಿಗೆ ಗುಪ್ತ ಮಾಹಿತಿ ನೀಡಿ ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸುವ ನಮ್ಮ ಸಂಕಲ್ಪಕ್ಕೆ ಸಾಥ್ ನೀಡಬೇಕು ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಬಾಲ್ಯ ವಿವಾಹ ಸಮಾಜದ ಬಹುದೊಡ್ಡ ಪಿಡುಗು ಇದನ್ನು ತಡೆಗಟ್ಟುವ ಹೊಣೆಗಾರಿಕೆ ಎಲ್ಲರ ಮೇಲಿದೆ. 12ನೇ ಶತಮಾನದಲ್ಲೇ ವಿಶ್ವಗುರು ಬಸವಣ್ಣನವರು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಆದ್ಯತೆ ನೀಡಿದ್ದರು. ಆ ಕಾರಣಕ್ಕಾಗಿಯೇ ಇಂದು ಮಹಿಳೆಯರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಧೈರ್ಯದಿಂದ ಕುಟುಂಬವನ್ನು ಮುನ್ನಡೆಸುತ್ತಿದ್ದಾರೆ.

ಆದರೆ ಅಲ್ಲಲ್ಲಿ ವಿವಿಧ ಕಾರಣಗಳಿಂದ ನಡೆಯುತ್ತಿರುವ ಬಾಲ್ಯ ವಿವಾಹ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ ಇದನ್ನು ನಿಲ್ಲಿಸುವ ಕೆಲಸ ಎಲ್ಲರೂ ಸೇರಿ ಮಾಡಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗುರುರಾಜ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಅನುಪಮಾ ರಾಚಣ್ಣ ಅಧ್ಯಕ್ಷತೆ ವಹಿಸಿದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಅವರು ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ್, ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ, ಪಿಡಿಓ ಪ್ರಿಯದರ್ಶಿನಿ, ರವಿ ರಾಚಣ್ಣ, ಬಸವರಾಜ ಪ್ರಭಾ ಸೇರಿದಂತೆ ಹಲವರು ಇದ್ದರು.

ಚೇತನಕುಮಾರ ರಾಜಕುಮಾರ ಅಲಶೆಟ್ಟೆ ವಚನ ಗಾಯನ ನಡೆಸಿ ಕೊಟ್ಟರು. ದೈಹಿಕ ನಿರ್ದೇಶಕ ಅನಿಲಕುಮಾರ ಪಾಟೀಲ್ ಪ್ರತಿಜ್ಞಾವಿಧಿ ಬೋಧಿಸಿದರು. ಆಡಳಿತಾಧಿಕಾರಿ ಮೋಹನ ರೆಡ್ಡಿ ಸ್ವಾಗತಿಸಿದರು. ಮಧುಕರ ಗಾಂವಕರ್ ನಿರೂಪಿಸಿದರು. ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ವಂದಿಸಿದರು.


ಗ್ರಾಮದಿಂದ ಜಿಲ್ಲಾ ಮಟ್ಟದವರಿಗೂ ಬಾಲ್ಯ ವಿವಾಹ ನಡೆಯದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ತಪ್ಪಿದ್ದಲ್ಲಿ ಆಯೋಗ ಕ್ರಮ ಜರುಗಿಸಲಿದೆ.

– ಶಶಿಧರ ಕೋಸಂಬೆ ಸದಸ್ಯರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಮಕ್ಕಳ ಕ್ಷೇತ್ರದಲ್ಲಿ ದಶಕದಿಂದ ಶಶಿಧರ ಕೋಸಂಬೆ ಅವರು ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಆಯೋಗ ಸದಸ್ಯರಾಗಿ ರಾಜ್ಯಾದ್ಯಂತ ಸಂಚರಿಸಿ ಮಕ್ಕಳ ರಕ್ಷಣೆಗೆ ಕಾಳಜಿ ವಹಿಸುತ್ತಿರುವುದು ಮಾದರಿ ಎನಸಿದೆ.

  • ಗುರುಬಸವ ಪಟ್ಟದ್ದೇವರು ಪೀಠಾಧಿಪತಿಗಳು, ಹಿರೇಮಠ ಸಂಸ್ಥಾನ ಭಾಲ್ಕಿ