ಬೀದರ್ ಪಾಲಿಗೆ ನಿರಾಸೆ ತಂದ ಬಜೆಟ್

ಬೀದರ್: ಫೆ.17:ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನಲ್ಲಿ ವಿಶೇಷತೆ ಇಲ್ಲ. ಬೀದರ್ ಜಿಲ್ಲೆಯ ಪಾಲಿಗೆ ಬಜೆಟ್ ತೀವ್ರ ನಿರಾಸೆ ಮೂಡಿಸಿದೆ ಎಂದು ಬಿಡಿಎ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಬಾಬು ವಾಲಿ ತಿಳಿಸಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಬಜೆಟ್ ಮೇಲೆ ಗಡಿ ಜಿಲ್ಲೆ ಬೀದರ್ ಜನ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಇದೀಗ ಅದು ಹುಸಿಯಾಗಿದೆ. ಬಜೆಟ್‍ನಲ್ಲಿ ಜಿಲ್ಲೆಗೆ ಬಂಪರ್ ಯೋಜನೆ ನೀಡಿಲ್ಲ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಜಿಲ್ಲೆಯ ಇಬ್ಬರು ಸಚಿವರು ಸಂಪುಟದಲ್ಲಿದ್ದಾರೆ. ಹೊಸ ಯೋಜನೆ ತರುವ ನಿರೀಕ್ಷೆ ಇತ್ತು. ಅದಕ್ಕೆ ಹಣಕಾಸು ಸಚಿವರೂ ಆದ ಸಿಎಂ ಸಿದ್ದರಾಮಯ್ಯ ಸ್ಪಂದಿಸಿಲ್ಲ ಎನ್ನುವದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ತಿಳಿಸಿದ್ದಾರೆ. ಗೋದಾವರಿ ಜಲಾನಯನದಲ್ಲಿ ಹರಿಯುವ ಜಿಲ್ಲೆಯ ಮಾಂಜ್ರಾ ನದಿ ನೀರಿನ ಸದ್ಬಳಕೆ ಕುರಿತು ಬಜೆಟ್‍ನಲ್ಲಿ ಪ್ರಸ್ತಾಪವಿಲ್ಲ. ಮಾಂಜ್ರಾ ನದಿ ನೀರಿನ ಬಳಕೆ ಮಾಡಿಕೊಂಡರೆ ಹಿಂದುಳಿದ ಭಾಗದ ಸಹಸ್ರಾರು ರೈತರ ಆರ್ಥಿಕ ಸ್ಥಿತಿ ಸುಧಾರಿಸಬಹುದು. ಜಿಲ್ಲೆಯ ಜನಪ್ರತಿನಿಗಳ ನಿರ್ಲಕ್ಷ್ಯದಿಂದ ನಮ್ಮ ನೀರು ಪೆÇೀಲಾಗುತ್ತಿದೆ. ಜಿಲ್ಲೆಗೆ ಇಬ್ಬರು ಮಂತ್ರಿಗಳಿದ್ದರೂ ಏನೂ ಲಾಭ ಆಗಿಲ್ಲ ಎಂದು ತಿಳಿಸಿದ್ದಾರೆ.