ಬೀದರ್ ನಲ್ಲಿ ವಿಶ್ವ ಜಾನಪದ ಸಮ್ಮೇಳನ ಆಯೋಜನೆ

ಬೀದರ‌:ಡಿ.26: ‘ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ₹ 5 ಕೋಟಿ ವೆಚ್ಚದಲ್ಲಿ ನಗರದಲ್ಲಿ ವಿಶ್ವ ಜಾನಪದ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ’ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ಹೇಳಿದರು.

ಇಲ್ಲಿಯ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಯುವ ಜನೋತ್ಸವದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಒಟ್ಟು ಐದು ದಿನಗಳ ವರೆಗೆ ಸಮ್ಮೇಳನ ನಡೆಯಲಿದೆ. ದೇಶದ ಎಲ್ಲ ರಾಜ್ಯಗಳ ಸುಮಾರು ಎರಡು ಸಾವಿರ ಕಲಾವಿದರು, ಸಾರ್ಕ್‌ ದೇಶಗಳ ಕಲಾವಿದರು ಹಾಗೂ ಜಾನಪದ ತಜ್ಞರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಾನಪದ ತಜ್ಞರು ಭಾಗವಹಿಸಲಿದ್ದಾರೆ. ಪುಸ್ತಕ ಮಳಿಗೆ, ಕರಕುಶಲ ವಸ್ತಗಳ ಪ್ರದರ್ಶನವೂ ಇರಲಿದೆ’ ಎಂದು ತಿಲಿಸಿದರು.
ಫೆಬ್ರುವರಿಯಲ್ಲಿ ಸಮ್ಮೇಳನ ನಡೆಯಬೇಕಿತ್ತು. ಕೋವಿಡ್‌ ಕಾರಣದಿಂದಾಗಿ ಮುಂದೂಡಲಾಗಿದೆ. ಸಮ್ಮೇಳನಕ್ಕೆ ಸಿದ್ಧತೆ ಮಾಡಿಕೊಳ್ಳಲು ಕನಿಷ್ಠ ಆರು ತಿಂಗಳು ಬೇಕು. ಕೋವಿಡ್‌ ನಿರ್ಮೂಲನೆಯ ನಂತರ ಸಿದ್ಧತೆ ಆರಂಭಿಸಲಾಗುವುದು’ ಎಂದು ಹೇಳಿದರು.

‘ಸಮ್ಮೇಳನಕ್ಕೆ ಕೇಂದ್ರ ಸಂಸ್ಕೃತಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಂಚಾಯತ್‌ ರಾಜ್ ಇಲಾಖೆ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತು , ಇಂಟರ್‌ನ್ಯಾಷನಲ್‌ ಫೋಕ್‌ ಆರ್ಟ್‌ ಸೆಂಟರ್ ಹಾಗೂ ಬೀದರ್‌ ಜಿಲ್ಲೆಯ ಸರ್ಕಾರಿ ನೌಕರರಿಂದಲೂ ದೇಣಿಗೆ ಪಡೆಯಲಾಗುವುದು’ ಎಂದರು.

‘ಕರ್ನಾಟಕ ಸಾಹಿತ್ಯ ಸಂಘ 67ನೇ ವರ್ಷದಲ್ಲಿ ಪದಾರ್ಪಣೆ ಮಾಡಿದೆ. ಇದೇ ಸ್ಥಳದಲ್ಲಿ 41ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ. ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸುಸಜ್ಜಿತವಾದ ಭವನ ನಿರ್ಮಾಣ ಮಾಡಲಾಗಿದೆ’ ಎಂದು ತಿಳಿಸಿದರು.

‘ಮಾನಸಿಕ ಒತ್ತಡದಿಂದ ಹೊರ ಬರಲು ಸಂಗೀತ ಹಾಗೂ ಕಲೆಗಳು ಪೂರಕವಾಗಿವೆ. ಸಂಗೀತ, ಕಲೆಗಳಿಂದ ಮಾನಸಿಕ ನೆಮ್ಮದಿ ಹಾಗೂ ಮನುಷ್ಯತ್ವ ನೆಲೆಯೂರುತ್ತದೆ. ಇಂದಿನ ಯುವಕರು ಜಾನಪದ ಕಲೆ ಹಾಗೂ ಸಂಗೀತದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.