ಬೀದರ್ ನಲ್ಲಿನ್ನೂ ಚಳಿಯೋ ಚಳಿ

ಕಲಬುರಗಿ,ಡಿ.25-ಬೀದರ್ ಜಿಲ್ಲೆಯ ಜನತೆ ಇನ್ನೂ ಚಳಿಯಿಂದ ನಡಗುವಂತಾಗಿದೆ. ಗುರುವಾರ ರಾಜ್ಯದಲ್ಲಿಯೇ ಅತೀ ಕಡಿಮೆ ಅಂದರೆ, 8.4 ಡಿಗ್ರಿ ಸೆಲ್ಸಿಯಸ್ ನ್ನಷ್ಟು ಕಡಿಮೆ ತಾಪಮಾನ ಇಲ್ಲಿ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸದರೆ ಈ ವರ್ಷ 7.3 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಇಳಿಕೆಯಾಗಿದೆ. ಇದರಿಂದಾಗಿ ಶೀತಗಾಳಿ, ಚಳಿ ಹೆಚ್ಚಾಗಿ ಜನ ನಡಗುವಂತಾಗಿದೆ.
ಕಳೆದ ಎರಡ್ಮೂರು ದಿನಗಳಿಗೆ ಹೋಲಿಸಿದರೆ ಚಳಿ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ.
ಇನ್ನು ವಿಜಯಪುರದಲ್ಲಿ 11.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾದರೆ, ಬೆಳಗಾವಿ ವಿಮಾನ ನಿಲ್ದಾಣದಲ್ಲಿ 14.0, ಧಾರವಾಡದಲ್ಲಿ 14.2, ಗದಗನಲ್ಲಿ 14.8, ರಾಯಚೂರಿನಲ್ಲಿ 15.0, ಕೊಪ್ಪಳದಲ್ಲಿ 15.2, ಕಲಬುರಗಿಯಲ್ಲಿ 16.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೀದರ್ ನಲ್ಲಿ 7.3, ವಿಜಯಪುರದಲ್ಲಿ 4.1, ರಾಯಚೂರಿನಲ್ಲಿ 1.2, ಗದಗನಲ್ಲಿ 0.8, ಕಲಬುರಗಿಯಲ್ಲಿ 0.7, ಬೆಳಗಾವಿ ವಿಮಾನ ನಿಲ್ದಾಣದಲ್ಲಿ 0.2 ನಷ್ಟು ತಾಪಮಾನ ಇಳಿಕೆಯಾಗಿದೆ.
ಬೀದರ್, ವಿಜಯಪುರ, ರಾಯಚೂರು, ಬೆಳಗಾವಿ, ಧಾರವಾಡ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಚಳಿ ಹೆಚ್ಚಾಗಿರುವುದರಿಂದ ಈ ಜಿಲ್ಲೆಗಳ ಜನ ಗಡಗಡನೆ ನಡುಗುವಂತಾಗಿದೆ.
ಚಳಿ ಹೆಚ್ಚಾಗಿರುವುದರಿಂದ ಬೆಳಗಿನಜಾವ ಜನ ರಸ್ತೆ ಮೇಲೆ ಜನರ ಓಡಾಟ ವಿರಳವಾಗಿದೆ. ಸೂರ್ಯೋದಯವಾದ ನಂತರ ಜನರು ಮನೆಯಿಂದ ಹೊರ ಬರುವಂತಾಗಿದೆ. ರಾತ್ರಿ ವೇಳೆಯೂ ಚಳಿ ಹೆಚ್ಚಾಗಿರುವುದರಿಂದ ಜನರ ಓಡಾಟ ಕಡಿಮೆಯಾಗಿದೆ. ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಜನ ಚಳಿಯಿಂದ ರಕ್ಷಣೆ ಪಡೆಯಲು ಬೆಂಕಿ ಕಾಯಿಸುತ್ತ ಕುಳಿತುಕೊಳ್ಳುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾದಂತಾಗಿದೆ.