ಬೀದರ್ ನಗರಸಭೆ; ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ

ಬೀದರ:ಎ.6: ನಗರಸಭೆಯ ಚುನಾವಣೆಯ ನಿಮಿತ್ತವಾಗಿ ಬೀದರ ನಗರದ ಮಾಧವನಗರದಲ್ಲಿರುವ ಕಚೇರಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಅವರ ನೇತೃತ್ವದಲ್ಲಿ ಪ್ರಮುಖ ಸಭೆ ನಡೆಯಿತು.

ಈ ವೇಳೆ ಮಾತನಾಡಿದ, ಸೂರ್ಯಕಾಂತ ನಾಗಮಾರಪಲ್ಳಿ ಅವರು, ನಗರಸಭೆಯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಪ್ರತಿ ವಾರ್ಡ್‍ನ ಬೂತ್‍ಗಳಲ್ಲಿರುವವರು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು. ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕು ಎಂದರು.

ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ಹಾಗೂ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರ ಸರಕಾರಗಳ ಜನಪ್ರಿಯ ಯೋಜನೆಗಳನ್ನು ಜನತೆಗೆ ಮನವರಿಕೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಅಲ್ಲದೆ, ಕೋವಿಡ್-19 ಮಹಾಮಾರಿಯ ವೇಳೆ ಬಿಜೆಪಿ ಪಕ್ಷವು ಜನರೊಂದಿಗೆ ಇತ್ತು. ಆನರಿಗೆ ಸಾಕಷ್ಟು ಸೇವೆ ಒದಗಿಸಿದೆ. ಇದೆಲ್ಲವನ್ನೂ ಮತದಾರರಿಗೆ ಮನವರಿಕೆ ಮಾಡಿಕೊಟ್ಟು, ಅತೀ ಹೆಚ್ಚಿನ ಸಂಖ್ಯೆಯ ಬಿಜೆಪಿ ಅಭ್ಯರ್ಥಿಗಳು ಬೀದರ್ ನಗರಸಭೆಯ ಚುನಾವಣೆಯಲ್ಲಿ ಗೆಲ್ಲುವಂತಹ ವಾತಾವರಣವನ್ನು ಸೃಷ್ಟಿಸಬೇಕಿದೆ ಎಂದರು.

ಬೀದರ್ ನಗರಾಭಿವೃದ್ಧಿ ಪ್ರಾಧೀಕಾರದ ಅಧ್ಯಕ್ಷ ಬಾಬು ವಾಲಿ ಅವರು ಮಾತನಾಡಿ, ಬೀದರ್ ನಗರಸಭೆಯ ಮೇಲೆ ಈ ಬಾರಿ ಬಿಜೆಪಿ ಬಾವುಟ ಹಾರಿಸುವುದು ಶತಸಿದ್ಧ. ಇದಕ್ಕಾಗಿ ಎಲ್ಲ ರೀತಿಯ ತಯಾರಿ ನಡೆಯುತ್ತಿವೆ. ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು.

ಸಭೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಟೊಣ್ಣೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರಹಂತ ಸಾವಳೆ, ಪಕ್ಷದ ಪ್ರಮುಖರಾದ ರೇವಣಸಿದ್ದಪ್ಪ ಜಲಾದೆ, ಹಿರಿಯರಾದ ಎನ್.ಆರ್. ವರ್ಮಾ, ಸೂರ್ಯಕಾಂತ ಶೆಟಕಾರ್, ವಿಜಯಕುಮಾರ ಪಾಟೀಲ್ ಗಾದಗಿ, ರಾಜು ಚಿದ್ರಿ, ನಗರಾಧ್ಯಕ್ಷ ಹಣಮಂತ ಬುಳ್ಳಾ, ರಾಜೇಂದ್ರ ಪೂಜಾರಿ ಹಾಗೂ ಇತರರು ಇದ್ದರು. ಟಿಕೆಟ್ ಆಕಾಂಕ್ಷಿಗಳು ಇದೇ ವೇಳೆ ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೆ ಮನವಿ ಸಲ್ಲಿಸಿದರು.