ಬೀದರ್ ನಗರಸಭೆಯ ಎಲ್ಲ ವಾರ್ಡ್ಗಳಿಂದ ಬಿಎಸ್ಪಿ ಸ್ಪರ್ಧೆ

ಬೀದರ‌:ಎ.3: ‘ನಗರಸಭೆಯ ವಾರ್ಡ್‌ಗಳಲ್ಲಿ ಬಿಎಸ್‌ಪಿಗೆ ಹೆಚ್ಚು ಸೀಟ್‌ಗಳನ್ನು ಗೆಲ್ಲುವ ಅವಕಾಶಗಳು ಇವೆ. ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಸಿ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸಬೇಕಾಗಿದೆ’ ಎಂದು ಬಿಎಸ್‌ಪಿ ರಾಜ್ಯ ಘಟಕದ ಕಾರ್ಯದರ್ಶಿ ಅಂಕುಶ್ ಗೋಖಲೆ ಹೇಳಿದರು.

ನಗರದ ಬರೀದ್‌ಶಾಹಿ ಹೋಟೆಲ್‌ ಸಭಾಂಗಣದಲ್ಲಿ ನಡೆದ ಬಿಎಸ್‌ಪಿ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್‌ ಹಾಗೂ ಬಿಜೆಪಿ ಕೆಳ ಸಮುದಾಯಗಳನ್ನು ಮೊದಲಿನಿಂದಲೂ ಕಡೆಗಣಿಸುತ್ತ ಬಂದಿವೆ. ಶೋಷಿತ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಕಾಳಜಿ ಹೊಂದಿರುವ ವ್ಯಕ್ತಿಗಳಿಗೆ ಪಕ್ಷದ ಬಾಗಿಲು ಸದಾ ತೆರದಿದೆ’ ಎಂದರು.

ರಾಜ್ಯ ಕಾರ್ಯದರ್ಶಿಗಳಾದ ದತ್ತು ಸೂರ್ಯವಂಶಿ, ಶಾಹನೂಲ್ ಹಖ್ ಬಾಬಾ ಬುಖಾರಿ, ಜಿಲ್ಲಾ ಸಂಯೋಜಕ ಸ್ವಾಮಿದಾಸ ಕೆಂಪೆನೋರ್, ಜಿಲ್ಲಾ ಘಟಕದ ಅಧ್ಯಕ್ಷ ಜಮೀಲ್ ಅಹ್ಮದ್ ಖಾನ್ ಮಾತನಾಡಿದರು.
ನಗರಸಭೆಯ ಚುನಾವಣೆಯಲ್ಲಿ ಎಲ್ಲ 35 ವಾರ್ಡ್‌ಗಳಲ್ಲಿ ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷ ಒಮ್ಮತದ ನಿರ್ಧಾರ ತೆಗೆದುಕೊಂಡಿತು. ಏಪ್ರಿಲ್ 6ರಿಂದ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸುವ ಹೊಣೆಯನ್ನು ಬೀದರ್ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳಿಗೆ ವಹಿಸಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ವಾಲಿ, ಜಾಫರ್ ಖುರೇಶಿ, ಇವಾನ್ ಡಿಸೋಜಾ, ರಾಜಕುಮಾರ ಸಿಂಧೆ, ಸಚಿನ್ ಗಿರಿ, ಸತ್ಯದೀಪ ಹಾವನೂರ, ರಾಜಕುಮಾರ ಡೊಂಗರೆ, ಶಕ್ತಿಕಾಂತ ಭಾವಿದೊಡ್ಡಿ, ಶೇಖ ಮೆಹಬೂಬದ್ , ಇನಾಯತ್ ಖಾನ್, ಖಾಲೀದ್ ಹಾಗೂ ಜುನೇದ್ ಇದ್ದರು.