ಬೀದರ್ ದಕ್ಷಿಣ ಕ್ಷೇತ್ರದ ಟಿಕೆಟ್ ಕೊಟ್ಟರೆ ಖಂಡಿತವಾಗಿ ಸ್ಪರ್ಧಿಸುವೆ: ಬಸವರಾಜ ಬುಳ್ಳಾ

ಚಿಟಗುಪ್ಪ :ಸೆ.12:’ರಾಜಕೀಯದಲ್ಲಿರುವವರಿಗೆ ಶಾಸಕ, ಸಂಸದನಾಗಬೇಕು ಎನ್ನುವ ಆಸೆ-ಆಕಾಂಕ್ಷೆಗಳು ಸಹಜ. ನಾನೇನು ಸಾಧು ಅಲ್ಲ. 47 ವರ್ಷಗಳಿಂದ ಕಾಂಗ್ರೆಸ್‍ನಲ್ಲಿ ಇದ್ದೇನೆ. ಪಕ್ಷದ ಹೈಕಮಾಂಡ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಟ್ಟರೆ ಖಂಡಿತವಾಗಿ ಸ್ಪರ್ಧಿಸುವೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಸವರಾಜ ಬುಳ್ಳಾ ಹೇಳಿದರು.
‘ಲೋಕಸಭೆ ಚುನಾವಣೆಯಲ್ಲಿ ಬೀದರ್ ಕ್ಷೇತ್ರ ಹಾಗೂ ಬಸವಕಲ್ಯಾಣ ಕ್ಷೇತ್ರದ ಟಿಕೆಟ್ ಕೇಳಿದ್ದೆ. ಆದರೆ, ಪಕ್ಷ ಬೇರೆಯವರಿಗೆ ಟಿಕೆಟ್ ಕೊಟ್ಟಿತು. ಹಾಗಂತ ಮುನಿಸಿಕೊಂಡು ಪಕ್ಷದಿಂದ ಹೊರಗೆ ಬರಲಿಲ್ಲ. ಪಕ್ಷದಲ್ಲಿ ಈಗಲೂ ನಿಷ್ಠೆಯಿಂದ ಕಾರ್ಯ ಮಾಡುತ್ತಿದ್ದೇನೆ’ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.
‘ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕರೂ ಸೇರಿದಂತೆ ಹಲವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಅಂತಿಮವಾಗಿ ಟಿಕೆಟ್ ಯಾರಿಗೂ ಕೊಡಬೇಕು ಎನ್ನುವುದು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ’ ಎಂದರು.
‘ಬೀದರ್ ದಕ್ಷಿಣದಲ್ಲಿ ಎರಡೂವರೆ ತಿಂಗಳಲ್ಲಿ ಒಂಬತ್ತು ನೇತ್ರ ತಪಾಸಣೆ ಶಿಬಿರ ಆಯೋಜಿಸಿ 4,100 ಜನರ ನೇತ್ರ ತಪಾಸಣೆ ಮಾಡಲಾಗಿದೆ. ಒಟ್ಟು 360 ಜನರ ನೇತ್ರ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಬಡವರ ಮನವಿ ಮೇರೆಗೆ ಮತ್ತೆ ಬೀದರ್ ತಾಲ್ಲೂಕಿನ ಬಗದಲ್ ಗ್ರಾಮದಲ್ಲಿ 10ನೇ ಉಚಿತ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಗಿದೆ’ ಎಂದು ತಿಳಿಸಿದರು.
‘ಬೀದರ್ ದಕ್ಷಿಣ ಕ್ಷೇತ್ರವನ್ನು ಅಂಧತ್ವ ಮುಕ್ತ ಕ್ಷೇತ್ರವನ್ನಾಗಿ ಮಾಡುವ ದಿಸೆಯಲ್ಲಿ ನೇತ್ರ ತಪಾಸಣೆ ಶಿಬಿರ ಮುಂದುವರಿಯಲಿದೆ. ಮನ್ನಾಎಖ್ಖೆಳ್ಳಿಯಲ್ಲಿ ನೇತ್ರ ತಪಾಸಣೆ ಶಿಬಿರ ಯಶಸ್ವಿಯಾದ ನಂತರ ಬೇರೆ ಬೇರೆ ಗ್ರಾಮಗಳಿಂದ ಮತ್ತೆ ಕಣ್ಣಿನ ತಪಾಸಣೆ ಮಾಡಿಕೊಳ್ಳಲು ಜನ ಬರುತ್ತಿದ್ದಾರೆ’ ಎಂದು ಹೇಳಿದರು.