ಬೀದರ್ ಡಿಸಿಸಿ ಬ್ಯಾಂಕ್ ಚುನಾವಣೆ: ಖಂಡ್ರೆ ಪೆನಾಲ್‍ನ ಮತ್ತಿಬ್ಬರಿಗೆ ಜಯ

ಬೀದರ್: ಅ.9:ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) ‘ಸಿ’ ವರ್ಗದ ಸದಸ್ಯತ್ವ ಪಡೆದಿರುವ ಜಿಲ್ಲೆಯ ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳ ಮತಕ್ಷೇತ್ರದ ಎರಡು ಸ್ಥಾನಗಳ ಮತ ಎಣಿಕೆ ಶನಿವಾರ ನಡೆಸಲಾಗಿದ್ದು, ಎರಡರಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆಯವರ ಸಹೋದರ ಅಮರಕುಮಾರ ಖಂಡ್ರೆ ಪೆನಾಲ್‍ನವರು ಜಯಿಸಿದ್ದಾರೆ.

ಇದರೊಂದಿಗೆ ಖಂಡ್ರೆ ಪೆನಾಲ್‍ನಿಂದ ಜಯ ಗಳಿಸಿದವರ ಸಂಖ್ಯೆ 10ಕ್ಕೆ ಏರಿಕೆಯಾದಂತಾಗಿದೆ. ಅಕ್ಟೋಬರ್ 4ರಂದು ನಡೆದ ಚುನಾವಣೆಯಲ್ಲಿ ಖಂಡ್ರೆ ಪೆನಾಲ್‍ನ 8 ಜನ ಹಾಗೂ ಉಮಾಕಾಂತ ನಾಗಮಾರಪಳ್ಳಿ ಪೆನಾಲ್‍ನ ಐದು ಜನ ಆಯ್ಕೆಯಾಗಿದ್ದರು. ಆಗಲೇ ಖಂಡ್ರೆ ಪೆನಾಲ್‍ನವರು ಡಿಸಿಸಿ ಬ್ಯಾಂಕಿನ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತವಾಗಿತ್ತು.

ಹೈಕೋರ್ಟ್‍ನಲ್ಲಿ ವ್ಯಾಜ್ಯ ಇದ್ದದ್ದರಿಂದ ಮತಗಳ ಎಣಿಕೆ ತಡೆ ಹಿಡಿಯಲಾಗಿತ್ತು. ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಶನಿವಾರ ಮತ ಎಣಿಕೆ ನಡೆಸಲಾಯಿತು. ವಿಜಯಕುಮಾರ ಪಾಟೀಲ ಹಾಗೂ ಶಕುಂತಲಾ ಬೆಲ್ದಾಳೆ ಅವರು ತಲಾ 8 ಮತಗಳನ್ನು ಪಡೆದು ಜಯ ಗಳಿಸಿದರೆ, ಮಹಮ್ಮದ್ ಸಲಿಮೊದ್ದೀನ್ ಹಾಗೂ ಸಿದ್ರಾಮ ಅವರು ತಲಾ ಆರು ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.