ಭಾಲ್ಕಿ:ಜು.25: ಬೀದರ್ ಜಿಲ್ಲೆಯಲ್ಲಿ ಹಸಿರು ಪ್ರದೇಶ ಹೆಚ್ಚಿಸಲು ಕ್ರಮ ವಹಿಸಲಾಗಿದೆ. ನಮ್ಮ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು ಎಲ್ಲ ವಿದ್ಯಾರ್ಥಿಗಳು ತಪ್ಪದೇ ಮನೆಗೊಂದು ಸಸಿ ನೆಟ್ಟು ಪೆÇೀಷಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯ(ಬಿಕೆಐಟಿ) ಆವರಣದಲ್ಲಿ ಜಿಲ್ಲಾ ಅರಣ್ಯ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ವನಮಹೋತ್ಸವ-2023 ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆ ಸಂಪತ್ಭರಿತ ಭೂಮಿ ಹೊಂದಿದೆ. ಫಲವತ್ತಾದ ಮಣ್ಣು ಇದೆ. ಎಲ್ಲ ಬೆಳೆಗಳು ಬೆಳೆಯಲು ಅವಕಾಶ ಇದೆ. ಆದರೆ ಸರಿಯಾಗಿ ಬಳಕೆ ಮಾಡಿಕೊಳ್ಳುವಲ್ಲಿ ಎಡುತ್ತಿದ್ದೇವೆ. ಪರಿಣಾಮ ಜಿಲ್ಲೆಯಲ್ಲಿ ಕೇವಲ ಶೇ.7 ರಿಂದ 8ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ ಎಂದು ಕಳವಳ ವ್ಯಕ್ತ ಪಡಿಸಿದರು.
ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಕಡಿಮೆ ಇದ್ದರೂ ಕೂಡ ಅರಣ್ಯೇತರ ಭೂಮಿ ಬಳಸಿಕೊಂಡು ಹಸಿರೀಕರಣ ಹೆಚ್ಚುವ ಪ್ರಯತ್ನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ 15 ಲಕ್ಷ ಗಿಡಗಳನ್ನು ನೆಡುವ ಗುರಿ ಅರಣ್ಯ ಇಲಾಖೆಗೆ ನೀಡಲಾಗಿತ್ತು.
ಕಳೆದ ಕೆಲ ದಿನಗಳಲ್ಲೇ ಸುಮಾರು 8 ಲಕ್ಷ ಗಿಡಗಳನ್ನು ನೆಟ್ಟಿರುವುದು ಸಂತಸ ತರಿಸಿದೆ. ಪಟ್ಟಣದಲ್ಲಿ ಒಂದೇ ದಿನ 5800 ಗಿಡಗಳನ್ನು ನೆಡುವ ಮೂಲಕ ಈ ವರ್ಷದಲ್ಲಿ ತಾಲೂಕಿನಲ್ಲಿ 5 ಲಕ್ಷ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಮನುಷ್ಯ ಐಷಾರಾಮಿ ಜೀವನ ಅನುಭವಿಸಲು ಪರಿಸರ ನಾಶ ಮಾಡುತ್ತಿದ್ದಾನೆ. ಹವಮಾನದಲ್ಲಿ ವೈಪರೀತ್ಯ ಉಂಟಾಗುತ್ತಿದೆ. ನೀರು, ಆಹಾರ, ಗಾಳಿಯಲ್ಲಿ ಮಾಲಿನ್ಯ ಉಂಟಾಗಿ ಮನುಷ್ಯ ರೋಗಗ್ರಸ್ತನಾಗುತ್ತಿದ್ದಾನೆ. ಹಾಗಾಗಿ ಪ್ರತಿಯೊಬ್ಬರು ಪರಿಸರ, ಪ್ರಕೃತಿ ಸಂರಕ್ಷಣೆ ಮುಂದಾಗಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡುಗೆಯಾಗಿ ನೀಡಬೇಕು ಎಂದು ತಿಳಿಸಿದರು.
ಪರಿಸರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ತು ಸದಸ್ಯ ಅರವಿಂದ ಅರಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ ರಂಜನ್, ಕಲಬುರಗಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸುನೀಲ ಪನ್ವಾರ್, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ, ಎಸ್ಪಿ ಚನ್ನಬಸವಣ್ಣ ಲಂಗೋಟಿ, ಬಿಕೆಐಟಿ ಪ್ರಾಚಾರ್ಯ ಡಾ.ನಾಗಶೆಟ್ಟೆಪ್ಪ ಬಿರಾದಾರ್, ಡಿಡಿಪಿಯು ಚಂದ್ರಕಾಂತ ಶಾಹಾಬಾದಕರ್ ಸೇರಿದಂತೆ ಹಲವರು ಇದ್ದರು. ಬೀದರ್ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ.ಸ್ವಾಗತಿಸಿದರು. ಪ್ರಾಚಾರ್ಯ ಅಶೋಕ ರಾಜೋಳೆ ನಿರೂಪಿಸಿದರು. ಎ.ಜಿ.ಪಾಟೀಲ್ ವಂದಿಸಿದರು.