ಬೀದರ್ ಜಿಲ್ಲೆಯಲ್ಲಿ ಅರಳಿದ ಕಮಲ: ಕುಸಿದ ಕೈ ಬಲ

ವಿಶೇಷ ವರದಿ: ಶಿವಕುಮಾರ ಸ್ವಾಮಿ

ಬೀದರ್: ಮೇ.13:ನಾಡಿನ ಮುಕುಟಪ್ರಾಯ ಗಡಿ ಜಿಲ್ಲೆ ಬೀದರ್‍ನಲ್ಲಿ ಈ ಬಾರಿ ಹಿಂದಿಗಿಂತಲೂ ಕಾಂಗ್ರೆಸ್ ಸೋಲು ಕಂಡಿದೆ.

2018ರಲ್ಲಿ ಭಾಲ್ಕಿ, ಹುಮನಾಬಾದ್, ಬೀದರ್ ಸ್ಥಳಿಯ ಹಾಗೂ ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಗೆದ್ದು ಬೀಗಿತ್ತು. ಔರಾದ್ ಮೀಸಲು ವಿಧಾನ ಸಭೆ ಕ್ಷೇತ್ರದಲ್ಲಿ ಕಮಲ ಅರಳಿತು. ಪ್ರಭು ಚವ್ಹಾಣ ಅಲ್ಲಿ ಮೂರನೆ ಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸಿದರು. ನಂತರದ ಬೆಳವಣಿಗೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಬಸವಕಲ್ಯಾಣ ಶಾಸಕರಾಗಿದ್ದ ಬಿ.ನಾರಾಯಣರಾವ ವಿಧಿವಶರಾದರು. ಉಪ ಚುನಾವಣೆ ನಡೆದ ಹಿನ್ನೆಲೆ ಅಲ್ಲಿ ಕೋವಿಡ್ ಕಾಲದಲ್ಲಿ ಆಹಾರ ಕಿಟ್ ಹಂಚುವ ಮೂಲಕ ಜನರ ಮನಸ್ಸು ಗೆದ್ದಿದ್ದ ಶರಣು ಸಲಗಾರ ವಿಜಯ ಪತಾಕೆ ಹಾರಿಸಿದರು. ಆಗ ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ಉಳಿದುಕೊಂಡಿತು.

ಆದರೆ ಈ ಬಾರಿ 2023ರ ವಿಧಾನ ಸಭೆ ಚುನಾವಣೆಯಲ್ಲಿ ಬಸವಕಲ್ಯಾಣದಲ್ಲಿ ಮಾಜಿ ಧರಂಸಿಂಗ್ ಅವರ ಸುಪುತ್ರರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಶರಣು ಸಲಗಾರ ಅವರ ಪ್ರಬಲ ಪೈಪೋಟಿ ಒಡ್ಡಿದ್ದರು. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಅನೇಕ ನಾಯಕರು ಪಕ್ಷ ತೊರೆದು ವಿಜಯಸಿಂಗ್‍ರ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದರು. ಪ್ರಬಲ ನಾಯಕರೆಂದು ಬಿಂಬಿತರಾಗಿದ್ದ ಗುಂಡುರೆಡ್ಡಿ ನೇರವಾಗಿ ಕೇಂದ್ರ ಸಚಿವ ಭಗವಂತ ಖೂಬಾಗೆ ಚಾಲೆಂಜ್ ಮಾಡಿದ್ದರು. ಆದರೆ ಕ್ಷೇತ್ರದ ಜನ ಇವರೆಲ್ಲರನ್ನು ಧಿಕ್ಕರಿಸಿ ಏಕಾಂಗಿಯಾಗಿ ಕಾರ್ಯಕರ್ತರನ್ನು ನಂಬಿ ಅವರ ಬಲದಿಂದ ಕ್ಷೇತ್ರದಲ್ಲಿ ಕಾಲಿಗೆ ಚೆಕ್ಕರ್ ಕಟ್ಟಿಕೊಂಡು ತಿರುಗಿದ್ದರು. ಸಲಗಾರ ನಮ್ಮ ಮನೆ ಮಗ, ವಿಜಯಸಿಂಗ್ ಕಲಬುರಗಿಯವರು ಎಂಬ ಭಾವನೆ ಕ್ಷೇತ್ರದ ಜನ ವ್ಯಕ್ತಪಡಿಸಿ ಸಲಗಾರ ಅವರನ್ನು ಮತ್ತೊಮ್ಮೆ ವಿಧಾನ ಸಭೆಗೆ ಕಳುಹಿಸುವ ಕಾರ್ಯ ಮಾಡಿದ್ದಾರೆ. ಶರಣು ಸಲಗಾರ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ವಿಜಯಸಿಂಗ ಅವರ ವಿರೂದ್ಧ ಸುಮಾರು 10 ಸಾವಿರ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.

ಭಾಲ್ಕಿಯಲ್ಲಿ ಈಶ್ವರ ಖಂಡ್ರೆಯವರು ನಾಲ್ಕನೇ ಬಾರಿ ಗೆಲ್ಲುವ ಮೂಲಕ ಈ ಬಾರಿಯ ಮಂತ್ರಿ ಮಂಡಳದಲ್ಲಿ ಪ್ರಬಲ ಮಂತ್ರಿಗಿರಿ ಪಡೆಯುವ ಸಂಭೌವಿದೆ. ಬೀದರ್ ಸ್ಥಳಿಯ ಹಾಲಿ ಶಾಸಕ ರಹಿಮ್ ಖಾನ್ ಅವರು ಸಹ ನಾಲ್ಕನೇ ಬಾರಿ ಗೆಲ್ಲುವ ಮೂಲಕ ‘ಮೈ ಕಿಸಿಸೆ ಕಮ್ ನಹಿ’ ಎಂದು ತೋರಿಸಿದ್ದಾರೆ. ಬೀದರ್ ದಕ್ಷಿಣದಲ್ಲಿ ಕಾಂಗ್ರೆಸ್‍ನ ಅಶೋಕ ಖೇಣಿ ವಿರೂದ್ಧ 1160 ಮತಗಳ ಅಂತರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಡಾ.ಶೈಲೇಂದ್ರ ಬೆಲ್ದಾಳೆ ವಿಜಯ ಪತಾಕೆ ಹಾರಿಸಿದ್ದಾರೆ. ಈ ಹಿಂದೆ ಬೆಲ್ದಾಳೆ ಎರಡು ಬಾರಿ ಹೀನಾಯವಾಗಿ ಸೋಲು ಕಂಡಿದ್ದರು. ಅನುಕಂಪದ ಅಲೆಯಲ್ಲಿ ಬೆಲ್ದಾಳೆ ಈ ಬಾರಿ ಬೀದರ್ ದಕ್ಷಿಣ ಕ್ಷೇತ್ರವನ್ನು ತನ್ನದಾಗಿಸಿಕೊಂಡಿದ್ದಾರೆ. ಔರಾದ್ ಮೀಸಲು ಕ್ಷೇತ್ರದಲ್ಲಿ ಅನೇಕ ಘಟಾನುಘಟಿ ನಾಯಕರು ಪ್ರಭು ಚವ್ಹಾಣರನ್ನು ಸೋಲಿಸಲು ಒಂದಾಗಿದ್ದರು. ಆದರೆ ಅವರೆಲ್ಲರ ಶಕ್ತಿ ಕಮಲದ ಮುಂದೆ ಕೆಲಸಕ್ಕೆ ಬಾರದಂತಾಯಿತು. ಕಾಂಗ್ರೆಸ್‍ನ ಅಭ್ಯರ್ಥಿ ಭೀಮಸೇನರಾವ ಶಿಂಧೆ ಅವರ ವಿರೂದ್ಧ ಹಾಲಿ ಸಚಿವ ಪ್ರಭು ಚವ್ಹಾಣ ಅವರು 9348 ಮತಗಳ ಅಂತರದಿಂದ ವಿಜಯ ಪತಾಕೆ ಹಾರಿಸಿದ್ದಾರೆ. ಇಡೀ ಕ್ಷೇತ್ರದ ತುಂಬೆಲ್ಲ ಚವ್ಹಾಣ ವಿರೋಧಿ ಅಲೆ ಇದ್ದರೂ ಯಾವ ಪ್ರಯೋಗಗಳು ಕೆಲಸಕ್ಕೆ ಬಾರದಾದವು.

ಆದರೆ ಇತ್ತಿಚೀಗೆ ಕೇಂದ್ರ ಸಚಿವ ಭಗವಂತ ಖೂಬಾ ಅವರು ಶರಣು ಸಲಗಾರ ಹಾಗೂ ಪ್ರಭು ಚವ್ಹಾಣ ಅವರನ್ನು ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದರು. ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದರಲ್ಲದೇ ತಮ್ಮ ಮಂತ್ರಿ ಸ್ಥಾನ ಸಹ ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಾರೆ ಹೇಳುವುದಾದರೆ ಬೀದರ್ ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಒಳ್ಳೆಯ ಅಲೆ ಎಬ್ಬಿಸುವಲ್ಲಿ ಯಶಸ್ವಿಯಾಗಿದೆ. ಗೋರ್ಟಾ(ಬಿ) ಯಲ್ಲಿ ಇತ್ತಿಚೀಗೆ ಅಮಿತ್ ಶಾ ಅವರನ್ನು ಕರೆಸಿ ಹುತಾತ್ಮ ಸ್ಮಾರಕ ಉದ್ಘಾಟಿಸಿದಕ್ಕೆ ಸಲಗಾರ ಅವರಿಗೆ ಜಯ ತಂದು ಕೊಟ್ಟರೆ ಹುಮನಾಬಾದ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಪ್ರಚಾರ ಸಭೆ ಸಿದ್ದು ಪಾಟೀಲರಿಗೆ ವಿಜಯ ತಂದು ಕೊಟ್ಟಿತು. ಬೀದರ್ ದಕ್ಷಿಣ ಹಾಗೂ ಔರಾದ್‍ನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರರ ಪ್ರಚಾರದಿಂದ ಡಾ.ಶೈಲೇಂದ್ರ ಬೆಲ್ದಾಳೆ ಹಾಗೂ ಪ್ರಭು ಚವ್ಹಾಣ ಅವರಿಗೆ ಜಯ ತಂದು ಕೊಟ್ಟಿದೆ ಎಂಬುದರಲ್ಲಿ ಎರಡು ಮಾತಿಲ್ಲ.