ಬೀದರ್ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನಸಾರೋಟಿನಲ್ಲಿ ಸರ್ವಾಧ್ಯಕ್ಷರ ಅದ್ಧೂರಿ ಮೆರವಣಿಗೆ

ಬೀದರ್:ಮಾ.10: ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ನಗರದಲ್ಲಿ ಶನಿವಾರ ಪುಷ್ಪಾಲಂಕೃತ ಸಾರೋಟಿನಲ್ಲಿ ಕನ್ನಡ ತಾಯಿ ಭುವನೇಶ್ವರಿ ಹಾಗೂ ಸರ್ವಾಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರ ಅದ್ಧೂರಿ ಮೆರವಣಿಗೆ ನಡೆಯಿತು.
ಮೆರವಣಿಗೆ ಉದ್ದಕ್ಕೂ ಕನ್ನಡ ಧ್ವಜಗಳು ರಾರಾಜಿಸಿದರೆ, ಧ್ವನಿ ವರ್ಧಕದಲ್ಲಿ ಕನ್ನಡ ಗೀತೆಗಳು ಮೊಳಗಿದವು. ಕನ್ನಡ ತಾಯಿ ಭುವನೇಶ್ವರಿಗೆ ಜಯವಾಗಲಿ, ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಎಂಬಿತ್ಯಾದಿ ಘೋಷಣೆಗಳು ಮುಗಿಲು ಮುಟ್ಟಿದವು.
ಡೊಳ್ಳು ಕುಣಿತ, ಬ್ಯಾಂಡ್, ಹಲಿಗೆ, ಕೋಲಾಟ, ಲಂಬಾಣಿ ನೃತ್ಯ ಮೊದಲಾದ ಕಲಾ ತಂಡಗಳು ಮೆರವಣಿಗೆಗೆ ಕಳೆ ನೀಡಿದವು. ಶರಣರು, ಮಹಾ ಪುರುಷರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೇಷಧಾರಿಗಳು ಸಾರ್ವಜನಿಕರ ಗಮನ ಸೆಳೆದರು.
ಸಾರೋಟಿನಲ್ಲಿ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ಸರ್ವಾಧ್ಯಕ್ಷರು ಇದ್ದರೆ, ಟ್ರ್ಯಾಕ್ಟ???ಗಳಲ್ಲಿ ಬಸವಣ್ಣ, ಅಕ್ಕ ಮಹಾದೇವಿ, ಮಹಾತ್ಮ ಗಾಂಧೀಜಿ, ತುಮಕೂರಿನ ಡಾ. ಶಿವಕುಮಾರ ಸ್ವಾಮೀಜಿ, ಡಾ. ಚನ್ನಬಸವ ಪಟ್ಟದ್ದೇವರು, ರಾಣಿ ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮೊದಲಾದವರ ಪಾತ್ರಧಾರಿ ಮಕ್ಕಳು ಆಸೀನರಾಗಿದ್ದರು. ತೋಟಗಾರಿಕೆ ಇಲಾಖೆ ವಾಹನ ಸ್ತಬ್ಧ ಚಿತ್ರ ಹೊತ್ತು ಸಾಗಿತ್ತು. ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
‘ಧ್ವನಿವರ್ಧಕದಲ್ಲಿ ಮೊಳಗಿದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…’, ‘ಅವ್ವ ಕಣೋ ಕನ್ನಡ…’ ಮುಂತಾದ ಗೀತೆಗಳ ತಾಳಕ್ಕೆ ತಕ್ಕಂತೆ ಕನ್ನಡಾಭಿಮಾನಿಗಳು ಕುಣಿದು ಕುಪ್ಪಳಿಸಿದರು. ಗಣ್ಯರೂ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ ದಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಮಜ್ಜಿಗೆ, ಕುಡಿಯುವ ನೀರು ಹಾಗೂ ಕಡಲೆ ಗುಗರಿ ವಿತರಿಸಿದರು. ಸರ್ವಾಧ್ಯಕ್ಷರನ್ನು ಅನೇಕರು ಶಾಲು ಹೊದಿಸಿ ಗೌರವಿಸಿದರು.
ಮನ್ನಳ್ಳಿ ರಸ್ತೆಯಲ್ಲಿ ಇರುವ ಕರ್ನಾಟಕ ಪದವಿಪೂರ್ವ ಕಾಲೇಜಿನಿಂದ ಆರಂಭಗೊಂಡ ಮೆರವಣಿಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಮಹಾತ್ಮ ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಭಗ???ಸಿಂಗ್ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಪ್ರಭುರಾವ್ ಕಂಬಳಿವಾಲೆ ರಸ್ತೆ, ರೋಟರಿ ಕನ್ನಡಾಂಬೆ ವೃತ್ತದ ಮಾರ್ಗವಾಗಿ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರಕ್ಕೆ ತಲುಪಿ ಸಮಾರೋಪಗೊಂಡಿತು.
ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಮತ್ತು ಹಜ್ ಸಚಿವ ರಹೀಂಖಾನ್ ಜಂಟಿಯಾಗಿ ಡೊಳ್ಳು ಬಾರಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಹಾರಕೂಡದ ಚನ್ನವೀರ ಶಿವಾಚಾರ್ಯರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಡಾ. ಗಂಗಾಂಬಿಕೆ ಅಕ್ಕ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಮನು ಬಳಿಗಾರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಸಮ್ಮೇಳನ ಸ್ವಾಗತ ಸಮಿತಿಯ ಕೋಶಾಧ್ಯಕ್ಷ ಬಾಬುವಾಲಿ, ಸಾಹಿತಿಗಳಾದ ಡಾ. ಬಸವರಾಜ ಬಲ್ಲೂರ, ಭಾರತಿ ವಸ್ತ್ರದ್, ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಗಳಾದ ಟಿ.ಎಂ. ಮಚ್ಚೆ, ಶಿವಕುಮಾರ ಕಟ್ಟೆ, ಖಜಾಂಚಿ ಶಿವಶಂಕರ ಟೋಕರೆ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ, ಮೆರವಣಿಗೆ ಸಮಿತಿ ಅಧ್ಯಕ್ಷ ಜಯರಾಜ ಖಂಡ್ರೆ, ಪ್ರಮುಖರಾದ ಚಂದ್ರಶೇಖರ ಹೆಬ್ಬಾಳೆ, ಸಚಿನ್ ಕೊಳ್ಳೂರ, ವಿಜಯಕುಮಾರ ಪಾಟೀಲ ಯರನಳ್ಳಿ, ಗುರುನಾಥ ರಾಜಗೀರಾ, ಪರಮೇಶ್ವರ ಬಿರಾದಾರ, ಸಂತೋಷಕುಮಾರ ಮಂಗಳೂರೆ, ಅಶೋಕ ದಿಡಗೆ, ವೀರಶೆಟ್ಟಿ ಚನಶೆಟ್ಟಿ, ಆನಂದ ಪಾಟೀಲ, ಸಿದ್ಧಾರೂಢ ಭಾಲ್ಕೆ ಮೊದಲಾದವರು ಪಾಲ್ಗೊಂಡಿದ್ದರು.


ಗಮನ ಸೆಳೆದ ಛಾಯಾಚಿತ್ರ, ಚಿತ್ರಕಲಾ ಪ್ರದರ್ಶನ
ಶನಿವಾರ ರಂಗ ಮಂದಿರದಲ್ಲಿ ಆರಂಭವಾದ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರ ಜೀವನ ಮತ್ತು ಸಾಧನೆಯ ಛಾಯಾಚಿತ್ರ ಹಾಗೂ ಚಿತ್ರಕಲಾ ಪ್ರದರ್ಶನ ಗಮನ ಸೆಳೆದವು.
ಪಟ್ಟದ್ದೇವರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕøತಿಕ ನಾಯಕರೆಂದು ಘೋಷಣೆ ಮಾಡಲು, ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ನಡೆಸಿದ ಪ್ರಯತ್ನ, ಬಸವ ತತ್ವ ಪ್ರಚಾರ, ಸಾಮಾಜಿಕ ಕಾರ್ಯ, ಭಾಲ್ಕಿ ಹಿರೇಮಠ ಸಂಸ್ಥಾನಕ್ಕೆ ಗಣ್ಯರ ಭೇಟಿ ಮೊದಲಾದ ಛಾಯಾಚಿತ್ರಗಳು ಪ್ರದರ್ಶನದಲ್ಲಿದ್ದವು.
ಚಿತ್ರಕಲಾ ಪ್ರದರ್ಶನದಲ್ಲಿ ಕಲಾವಿದರ ಕುಂಚದಲ್ಲಿ ಅರಳಿದ ವಿವಿಧ ಕಲಾಕೃತಿಗಳು ಇದ್ದವು. ದೇವರು, ನಿಸರ್ಗ, ಹಳ್ಳಿ ಜೀವನ ಮೊದಲಾದವು ನೋಡುಗರ ಚಿತ್ತ ತಮ್ಮತ್ತ ಸೆಳೆದವು.


ಪುಸ್ತಕ ಪ್ರಿಯರಿಗೆ ಪುಸ್ತಕ ಸಂತೆ
ಪುಸ್ತಕ ಪ್ರಿಯರಿಗೆ ಸಮ್ಮೇಳನದಲ್ಲಿ ಪುಸ್ತಕ ಸಂತೆ ಏರ್ಪಡಿಸಲಾಗಿತ್ತು.
ಸಂತೆಯಲ್ಲಿ ನೂರಾರು ಪುಸ್ತಕಗಳು ಪ್ರದರ್ಶನ ಹಾಗೂ ಮಾರಾಟಕ್ಕಿದ್ದವು.
ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಸಹ ನಡೆಯಿತು.


ಸಾಹಿತ್ಯಾಸಕ್ತರಿಗೆ ರುಚಿಕಟ್ಟಾದ ಭೋಜನ
ಸಮ್ಮೇಳನದಲ್ಲಿ ಮೊದಲ ದಿನ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ರುಚಿಕಟ್ಟಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಊಟದಲ್ಲಿ ಚಪಾತಿ, ಮಿಕ್ಸ್ ಪಲ್ಯ, ಮಿರ್ಚಿ ಭಜಿ, ಲಾಡು, ಅನ್ನ, ಸಾಂಬಾರು, ಹಪ್ಪಳ ಇದ್ದವು.
ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಜನ ಭೋಜನ ಸವಿದರು. ಸ್ವಯಂ ಸೇವಕರು ಊಟದ ವ್ಯವಸ್ಥೆ ನೋಡಿಕೊಂಡರು